Site icon Vistara News

ವೈದ್ಯರೇ ಯಮಕಿಂಕರರು; 7 ಜನರ ಸಾವಿಗೆ ಕಾರಣವಾದ ನಕಲಿ ಡಾಕ್ಟರ್ಸ್; ಜಾಲ ಬಯಲಾಗಿದ್ದು ಹೇಗೆ?

Fake Doctors Scam

Fake Doctors, Dead Patients: How A Huge Medical Racket Unfolded In Delhi

ನವದೆಹಲಿ: ‘ವೈದ್ಯೋ ನಾರಾಯಣ ಹರಿಃ’ ಎಂಬ ಮಾತಿದೆ. ಅಂದರೆ, ವೈದ್ಯರು ದೇವರ ಸಮಾನರು ಎಂದರ್ಥ. ಸಾವಿನ ದವಡೆಯಲ್ಲಿ ಸಿಲುಕಿದವರನ್ನು ಪಾರು ಮಾಡುವುದರಿಂದ ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಆದರೆ, ದೆಹಲಿಯಲ್ಲಿ (Delhi) ಮಾತ್ರ ನಕಲಿ ನಾಲ್ವರು ವೈದ್ಯರು (Fake Doctrors) ಏಳು ಜನರ ಪ್ರಾಣಕ್ಕೆ ಕುತ್ತು ತರುವ ಮೂಲಕ, ಜನ ವೈದ್ಯರು ಯಾರು, ನಕಲಿ ವೈದ್ಯರು ಯಾರು ಎಂಬುದನ್ನು ಗುರುತಿಸಲಾಗದೆ, ಭಯಪಡುವಂತಹ ಸ್ಥಿತಿ ನಿರ್ಮಿಸಿದ್ದಾರೆ.

ಹೌದು, ವೈದ್ಯಕೀಯ ನಿರ್ಲಕ್ಷ್ಯದಿಂದ ಇತ್ತೀಚೆಗೆ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಗ್ರೇಟರ್‌ ಕೈಲಾಶ್‌ ವ್ಯಾಪ್ತಿಯಲ್ಲಿರುವ ಅಗರ್ವಾಲ್‌ ಮೆಡಿಕಲ್‌ ಸೆಂಟರ್‌ನ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಾ. ನೀರಜ್‌ ಅಗರ್ವಾಲ್‌, ಅವರ ಪತ್ನಿ ಪೂಜಾ ಅಗರ್ವಾಲ್‌, ಡಾ. ಜಸ್‌ಪ್ರೀತ್‌ ಸಿಂಗ್‌ ಹಾಗೂ ಲ್ಯಾಬ್‌ ಟೆಕ್ನಿಷಿಯನ್‌ ಮಹೇಂದರ್‌ ಸಿಂಗ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ಇವರು ನಕಲಿ ದಾಖಲೆ ಸೃಷ್ಟಿಸಿ, ವೈದ್ಯರು ಎಂಬಂತೆ ಪೋಸ್‌ ಕೊಡುತ್ತಿದ್ದರು ಹಾಗೂ ಇವರೇ ಶಸ್ತ್ರಚಿಕಿತ್ಸೆ ಮಾಡಿ, ಇದುವರೆಗೆ ಏಳು ಜನರ ಸಾವಿಗೆ ಕಾರಣರಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

2022ರಲ್ಲಿ ಅಸ್ಘರ್‌ ಅಲಿ ಎಂಬುವರು ಇವರ ಆಸ್ಪತ್ರೆಗೆ ತೆರಳಿದ್ದಾರೆ. ತಪಾಸಣೆ ಮಾಡಿದ ಬಳಿಕ, “ನಿಮಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ. ಸರ್ಜನ್‌ ಆಗಿರುವ ಡಾ.ಜಸ್‌ಪ್ರೀತ್‌ ಅವರೇ ಆಪರೇಷನ್‌ ಮಾಡಬೇಕು” ಎಂದಿದ್ದಾರೆ. ಆದರೆ, ಡಾ.ಜಸ್‌ಪ್ರೀತ್‌ ಅವರ ಬದಲು ಪೂಜಾ ಹಾಗೂ ಮಹೇಂದರ್‌ ಅವರು ಸರ್ಜರಿ ಮಾಡಿದ್ದಾರೆ. ಸರ್ಜರಿ ಬಳಿಕ ಅಸ್ಘರ್‌ ಅವರಿಗೆ ಭಾರಿ ನೋವಾಗಿದೆ. ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆ ತಲುಪುತ್ತಲೇ ಅಲಿ ಮೃತಪಟ್ಟಿದ್ದಾರೆ. ಇದರ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದಾಗ, ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದಾಗ ಪ್ರಕರಣ ಸುದ್ದಿಯಾಗಿದೆ.

ಒಂಬತ್ತು ಪ್ರಕರಣ ದಾಖಲು

ಡಾ. ನೀರಜ್‌ ಅಗರ್ವಾಲ್‌ ಹಾಗೂ ಅವರ ಪತ್ನಿ ಪೂಜಾ ಅಗರ್ವಾಲ್‌ ಅವರ ವಿರುದ್ಧ ಇಂತಹ ಪ್ರಕರಣ ಕೇಳಿಬರುತ್ತಿರುವುದು ಇದೇ ಮೊದಲಲ್ಲ. 2016ರಿಂದ ಇದುವರೆಗೆ ‘ಮೆಡಿಕಲ್‌ ನೆಗ್ಲಿಜೆನ್ಸ್’‌ ಕುರಿತು ಇವರ ವಿರುದ್ಧ 9 ಪ್ರಕರಣ ದಾಖಲಾಗಿವೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಏಳು ಜನ ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ, ನಾಲ್ವರೂ ನಕಲಿ ದಾಖಲೆ ಸೃಷ್ಟಿಸಿ, ವೈದ್ಯರು ಎಂಬಂತೆ ಬಿಂಬಿಸಿಕೊಂಡು, ಜನರಿಗೆ ಮೋಸ ಮಾಡುವ ಜತೆಗೆ ಅವರ ಪ್ರಾಣ ತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪುಟ್ಟ ಮಗುವಿಗೆ ಅದೇನು ಸರ್ಜರಿ ಮಾಡಿ, ಓಡಿಹೋದನೋ ನಕಲಿ ವೈದ್ಯ; ಕೆಲವೇ ಹೊತ್ತಲ್ಲಿ ತೀವ್ರ ರಕ್ತಸ್ರಾವದಿಂದ ಸಾವು

ಸಂತ್ರಸ್ತರ ಕುಟುಂಬಸ್ಥರು ಹೇಳುವುದೇನು?

“ವೈದ್ಯಕೀಯ ಶಿಷ್ಟಾಚಾರಗಳನ್ನು ಪಾಲಿಸದೆಯೇ ಅಸ್ಘರ್‌ ಅಲಿ ಮೃತಪಟ್ಟಿದ್ದಾರೆ” ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. “ಡಾ. ನೀರಜ್‌ ಅಗರ್ವಾಲ್‌ ಅವರು ಫಿಜಿಷಿಯನ್.‌ ಆದರೆ, ಅವರು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಅವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ” ಎಂದು ದೂರಿದ್ದಾರೆ. ಲ್ಯಾಬ್‌ ಟೆಕ್ನಿಷಿಯನ್‌ ಮಹೇಂದರ್‌ ಕೂಡ ನಕಲಿ ದಾಖಲೆ ಹೊಂದಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣ ಬಯಲಾದ ಬಳಿಕ ಗ್ರೇಟರ್‌ ಕೈಲಾಶ್‌ ವ್ಯಾಪ್ತಿಯ ಜನ ಆಸ್ಪತ್ರೆಗೆ ತೆರಳಲೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version