ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (Chief Justice of India DY Chandrachud) ಅವರ ಫೋಟೋ ಮತ್ತು ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ (Social Media) ಷೇರ್ ಮಾಡಲಾದ ನಕಲಿ ಪೋಸ್ಟ್‌ನಲ್ಲಿ (Fake Posts) ಬಳಸಲಾಗಿದೆ. ಸುಪ್ರೀಂ ಕೋರ್ಟ್ (Supreme Court) ಈ ಕುರಿತು ಪೊಲೀಸರಿಗೆ ದೂರು ನೀಡಿದೆ. ಸರ್ಕಾರದ ವಿರುದ್ಧ ಸಿಜೆಐ ಪ್ರತಿಭಟಿಸಲು ಕರೆ ನೀಡಿರುವ ರೀತಿಯಲ್ಲಿ ಪೋಸ್ಟ್ ಷೇರ್ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿಗಳು ಅಂತಹ ಯಾವುದೇ ಪೋಸ್ಟ್ ಹಾಕಿಲ್ಲ ಅಥವಾ ಅವರು ಅಂತಹ ಯಾವುದೇ ಪೋಸ್ಟ್ ಅನ್ನು ಅಧಿಕೃತಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಈ ನಕಲಿ ಪೋಸ್ಟ್ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ. ಈ ಸಂಬಂಧ ದಿಲ್ಲಿ ಸೈಬರ್ ಪೊಲೀಸ್ ಸೆಲ್‌ನಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ದಾಖಲಿಸಿದೆ ಎಂದು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಅತುಲ್ ಕುಹರ್ಕೇಕರ್ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Cyber Crime: ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಪೋಸ್ಟ್ ಹಾಕಿದ್ರೆ ಪೊಲೀಸ್ ವಿಚಾರಣೆ ಗ್ಯಾರಂಟಿ!
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಹಳೆಯ ಫೋಟೋ ಬಳಸಲಾಗಿದೆ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರು ಪ್ರತಿಭಟಿಸುವಂತೆ ಕರೆ ನೀಡಲಾಗಿರುವ ಒಕ್ಕಣಿಕೆ ಇದೆ. ಇದು ನಕಲಿ ಪೋಸ್ಟ್ ಆಗಿದೆ. ಇಂಥ ಯಾವುದೇ ಪೋಸ್ಟ್ ಸಿಜೆಐ ಮಾಡಿಲ್ಲ. ಇದು ಫೇಕ್ ಪೋಸ್ಟ್. ಕಾನೂನು ಜಾರಿ ಅಧಿಕಾರಿಗಳ ಜತೆ ಸಮಾಲೋಚಿಸಿದ ಬಳಿಕ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಈ ಫೇಕ್ ಪೋಸ್ಟ್ ಯಾರು ಮಾಡಿದ್ದಾರೋ ಅವರ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯ ನ್ಯಾಯಮೂರ್ತಿಗಳ ಹೆಸರಿನಲ್ಲಿ ಫೇಕ್ ಮತ್ತು ಜನರನ್ನು ತಪ್ಪು ದಾರಿಗೆಳೆಯುವ ವಾಟ್ಸಾಪ್ ಫಾರ್ವರ್ಡ್ ಪೋಸ್ಟ್ ಹರಿದಾಡುತ್ತಿದೆ. ಇದನ್ನು ಖಂಡಿಸುತ್ತೇವೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.