ಭಾರತದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿ ಎನ್ನಿಸಿಕೊಂಡಿರುವ, ‘ನೈಕಾ’ ಬ್ಯೂಟಿ ಪ್ರಾಡಕ್ಟ್ ಕಂಪನಿ ಸಂಸ್ಥಾಪಕಿ ಮತ್ತು ಸಿಇಒ, ದೇಶದ ಸೆಲ್ಫ್ ಮೇಡ್ ಶ್ರೀಮಂತೆ ಎಂಬ ಖ್ಯಾತಿ ಪಡೆದ ಫಾಲ್ಗುಣಿ ನಾಯರ್ ಸಂಪತ್ತಿನ ಮೌಲ್ಯ ಕಳೆದ 15 ದಿನಗಳಲ್ಲಿ 1 ಬಿಲಿಯನ್ ಡಾಲರ್ಗಳಷ್ಟು (8300 ಕೋಟಿ ರೂಪಾಯಿ) ಕಡಿಮೆಯಾಗಿದೆ. ಇದೇ ತಿಂಗಳ 12ನೇ ತಾರೀಖಿನಿಂದು ಅವರ ಆಸ್ತಿ ಮೌಲ್ಯ 4.8 ಬಿಲಿಯನ್ ಡಾಲರ್ (32,915 ಕೋಟಿ ರೂಪಾಯಿ) ಇತ್ತು. ಆದರೆ ಅದರಲ್ಲೀಗ 1 ಬಿಲಿಯನ್ ಡಾಲರ್ ಕಡಿಮೆಯಾಗಿದೆ ಎಂದು ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ತಿಳಿಸಲಾಗಿದೆ.
ನೈಕಾ ಬ್ಯೂಟಿ ಪ್ರಾಡಕ್ಟ್ ಸಂಸ್ಥೆಯ ಮೂಲ ಕಂಪನಿ ಎಫ್ಎಸ್ಎನ್ ಇ-ಕಾಮರ್ಸ್ ವೆಂಚರ್ಸ್ನ ಷೇರುಗಳು ಕಳೆದ ಕೆಲವು ದಿನಗಳಿಂದಲೂ ಷೇರು ಮಾರುಕಟ್ಟೆಯಲ್ಲಿ ಕುಸಿಯುತ್ತಲೇ ಇವೆ. ಎರಡು ವಾರಗಳಲ್ಲಿ ಶೇ.20ರಷ್ಟು ಕುಸಿತಕಂಡಿವೆ. ಅದರಲ್ಲೂ ಶುಕ್ರವಾರ 975.5 ರೂ.ಗಳಿಗೆ ಇಳಿಕೆಯಾಗಿದ್ದು, ಕಳೆದ 52ವಾರಗಳಿಲ್ಲೇ ನೈಕಾ ಷೇರುಗಳು ಇಷ್ಟು ಕನಿಷ್ಠ ಮಟ್ಟಕ್ಕೆ ಕುಸಿದಿರಲಿಲ್ಲ. ಹೀಗೆ ನೈಕಾದ ಷೇರುಗಳು ನಿರಂತರವಾಗಿ ಕುಸಿದ ಹಿನ್ನೆಲೆಯಲ್ಲಿ ಅದರ ಸಂಸ್ಥಾಪಕಿ, ಮೇಕಪ್ ರಾಣಿ ಎಂದೇ ಹೆಸರು ಮಾಡಿರುವ ಫಾಲ್ಗುಣಿ ನಾಯರ್ ಆಸ್ತಿ ಮೌಲ್ಯವೂ ಕಡಿಮೆಯಾಗಿದೆ.
ಫಾಲ್ಗುಣಿ ಗುಜರಾತ್ ಮೂಲದವರಾಗಿದ್ದು ಈಗವರಿಗೆ 59ವರ್ಷ. 10 ವರ್ಷಗಳ ಹಿಂದೆ ಅಂದರೆ 2012ರಲ್ಲಿ ಫಾಲ್ಗುಣಿ ನಾಯರ್ ಈ ನೈಕಾವನ್ನು ಸಂಸ್ಥಾಪಿಸಿದರು. ಆಗಿನ್ನೂ ಅವರಿಗೆ 49-50ರ ವಯಸ್ಸು. ಯಾವುದೇ ಉದ್ಯಮದ ಹಿನ್ನೆಲೆ ಇರದೆ ಇದ್ದರೂ ಉದ್ಯಮ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದರು. ಭಾರತದ ಅತ್ಯಂತ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಎಂಬ ಖ್ಯಾತಿ ಪಡೆದಿದ್ದಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರನ್ನು ಹಿಂದಿಕ್ಕಿ ತಾವು ಆ ಸ್ಥಾನಕ್ಕೆ ಏರಿದ್ದಾರೆ. ಅಂದಹಾಗೇ ಕಿರಣ್ ಆಸ್ತಿ ಮೌಲ್ಯ 24, 800 ಕೋಟಿ ರೂಪಾಯಿ ಎಂದು ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ | ಫಾಲ್ಗುಣಿ ನಾಯರ್ ದೇಶದ ಶ್ರೀಮಂತ ಮಹಿಳೆ, ನೈಕಾ ಯಶಸ್ಸಿನ ಮುಕುಟಮಣಿ!