ನವದೆಹಲಿ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣಾ (Rajasthan Election) ಕಾವು ಜೋರಾಗುತ್ತಿದೆ. ಕಾಂಗ್ರೆಸ್ ಸರ್ಕಾರದ (Congress Party) ವಿರುದ್ಧ ಬಿಜೆಪಿ (BJP Party) ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದು, ರೈತರು ಸಾಲಬಾಧೆಯಿಂದ ನರಳುತ್ತಿದ್ದಾರೆಂಬುದನ್ನು ಜನರಿಗೆ ಮನದಟ್ಟು ಮಾಡುವುದಕ್ಕಾಗಿ ಕ್ಯಾಂಪೇನ್ ಆರಂಭಿಸಿದೆ. ಇದಕ್ಕಾಗಿ ರೈತರೊಬ್ಬರ (Rajasthan Farmer) ಫೋಟೋವನ್ನು ಬಿಜೆಪಿ ಬಳಸಿಕೊಂಡಿದ್ದು, ಆ ರೈತ ಈಗ ಬಿಜೆಪಿ ವಿರುದ್ಧ ದೂರು ನೀಡಿದ್ದಾರೆ(Case Against BJP). ಬಿಜೆಪಿ, ತನ್ನ ಕ್ಯಾಂಪೇನ್‌ಗೆ ಬಳಸಿಕೊಂಡಿರುವ ರೈತ ಸಾಲಬಾಧೆಯಿಂದ ಬಳಲುತ್ತಿದ್ದು, ಆತನ ಭೂಮಿಯನ್ನು ಹರಾಜು ಮಾಡಲಾಗಿದೆ ಎಂದು ಆರೋಪಿಸಿದೆ. ತನ್ನ ಸಾಲಗಾರ ರೈತನೆಂದು ಚಿತ್ರಿಸಿರುವ ಬಿಜೆಪಿ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ 70 ವರ್ಷ ರೈತ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Madhuram Jaypal ko BJP Rajasthani ikai aur BJP per manhani ka case karna chahie https://t.co/GCSzKONnls
— Arvind Sharma (@ArvindS08973903) October 6, 2023
ಜೈಸಲ್ಮೇರ್ ಜಿಲ್ಲೆಯ ರಾಮ್‌ದೇವ್ರಾ ನಿವಾಸಿ ಮಧುರಾಮ್ ಜೈಪಾಲ್ ಅವರು ತಮ್ಮ ದೂರಿನಲ್ಲಿ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಪಕ್ಷವು ತನ್ನನ್ನು ನಿಂದಿಸಿದೆ ಎಂದು ಅವರು ಆರೋಪಿಸಿದ್ದಾರೆ. ಜನರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹೀಗಾಗಿ ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದೆ ಎಂದು ಜೈಪಾಲ್ ಹೇಳಿದ್ದಾರೆ. ನನ್ನ ಜಮೀನು ಹರಾಜಾಗಿಲ್ಲ ಅಥವಾ ಸಾಲ ಕೂಡ ಮಾಡಿಲ್ಲ ಎಂದು ಜೈಪಾಲ್ ಹೇಳಿದ್ದಾರೆ. ನಮ್ಮದು ರೈತ ಕುಟುಂಬವಾಗಿದ್ದು, ಸುಮಾರು 200 ಬಿಘಾ ಭೂಮಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ತನ್ನ ಚುನಾವಣಾ ಪ್ರಚಾರದ ಭಾಗವಾಗಿ “ನಹೀ ಸಹೇಗಾ ರಾಜಸ್ಥಾನ” (ರಾಜಸ್ಥಾನ ಸಹಿಸುವುದಿಲ್ಲ) ಎಂಬ ಶೀರ್ಷಿಕೆಯೊಂದಿಗೆ ಜೈಪಾಲ್ ಅವರ ಚಿತ್ರದೊಂದಿಗೆ ರಾಜ್ಯದ 19000 ಕ್ಕೂ ಹೆಚ್ಚು ರೈತರ ಜಮೀನುಗಳನ್ನು ಹರಾಜು ಮಾಡಲಾಗಿದೆ ಎಂದು ಆರೋಪಿಸಿದೆ. ಜೈಪಾಲ್ ಅವರ ದೂರಿನ ಆಧಾರದ ಮೇಲೆ ರಾಮದೇವರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖಮ್ಮರಂ ಬಿಷ್ಣೋಯ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Assembly Election 2023: ಮದುವೆಗಳಿಗಾಗಿ ರಾಜಸ್ಥಾನ ಚುನಾವಣಾ ದಿನಾಂಕವೇ ಬದಲು!
ಬಿಜೆಪಿಯು ಜೋಧಪುರ ಮತ್ತು ಜೈಪುರದಲ್ಲಿ ತಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಂಡಿದೆ. ಬಿಜೆಪಿಯು ತಮ್ಮ ಮಾನನಷ್ಟಕ್ಕೆ ಕಾರಣವಾಗಿದೆ ಎಂದು ಜೈಪಾಲ್ ದೂರಿನಲ್ಲಿ ತಿಳಿಸಿದ್ದಾರೆಂದು ಬಿಷ್ಣೋಯಿ ಅವರು ಹೇಳಿದ್ದಾರೆ. ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮವನ್ನು ಆರಂಭಿಸಲಾಗಿದೆ. ತಮ್ಮ ಫೋಟೋಗಳಿರುವ ಪೋಸ್ಟರ್‌ಗಳನ್ನು ತೆಗೆಯುವಂತೆ ಜೈಪಾಲ್ ಮನವಿ ಮಾಡಿದ ಹೊರತಾಗಿಯೂ, ಬಿಜೆಪಿ ಅದೇ ಪೋಸ್ಟರ್‌ಗಳನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಜೈಪಾಲ್ ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಜೈಪಾಲ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಎಲ್ಲಾ ಪೋಸ್ಟರ್‌ಗಳನ್ನು ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿದ ಗೆಹ್ಲೋಟ್, ಜೈಪಾಲ್ ಅವರೊಂದಿಗಿನ ಭೇಟಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.