ನವದೆಹಲಿ: ಪಂಜಾಬ್ ಹಾಗೂ ಹರಿಯಾಣ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು (Farmers Protest) ಹಿಂಸಾಚಾರಕ್ಕೆ ತಿರುಗಿದ್ದು, ಖನೌರಿ ಗಡಿಯಲ್ಲಿ ಯುವ ರೈತ ಶುಭ ಕರಣ್ ಸಿಂಗ್ ಎಂಬಾತ ಪೊಲೀಸರ (Police) ಏಟಿಗೆ ಬಲಿಯಾಗಿದ್ದಾನೆ. ಹಾಗಾಗಿ, ಗಡಿಯಲ್ಲಿ ರೈತರು (Farmers) ಎರಡು ದಿನ ಪ್ರತಿಭಟನೆಯನ್ನು ನಿಲ್ಲಿಸಲು ತೀರ್ಮಾನಿಸಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರಗಳು ಪ್ರಯತ್ನಿಸುತ್ತಿರುವ ಕಾರಣ, ಪ್ರತಿಭಟನೆಯ ಮುಂದಿನ ಆಯಾಮಗಳು, ರೂಪುರೇಷೆಗಳನ್ನು ಚರ್ಚಿಸುವ ದಿಸೆಯಲ್ಲಿ ಎರಡು ದಿನ ವಿರಾಮ ನೀಡಲಾಗುತ್ತಿದೆ ಎಂದು ರೈತ ಸಂಘಟನೆ ತಿಳಿಸಿದೆ.
“ಪ್ರತಿಭಟನೆಯ ಮುಂದಿನ ಯೋಜನೆಯ ಕುರಿತು ಚರ್ಚಿಸುವ ದಿಸೆಯಲ್ಲಿ ಶುಕ್ರವಾರದವರೆಗೆ (ಫೆಬ್ರವರಿ 23) ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದೇವೆ. ರೈತ ಮುಖಂಡರ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮುಖ್ಯಸ್ಥ ಸರ್ವಾನ್ ಸಿಂಗ್ ಪಂಧೇರ್ ಅವರು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ತೀರ್ಮಾನಿಸಿವೆ ಎನ್ನಲಾಗುತ್ತಿದೆ.
This is not a state war but farmers protest in India where govt is all out running against poor people#FarmerProtestInDelhipic.twitter.com/xbkGfbvqSF
— Amock (@Politics_2022_) February 21, 2024
ಇದನ್ನೂ ಓದಿ: Farmers Protest: ಹರಿಯಾಣ ಪೊಲೀಸರ ಏಟಿಗೆ ಪ್ರತಿಭಟನಾನಿರತ ಯುವ ರೈತ ಸಾವು
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹಾಗೂ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರೈ ಅವರ ನೇತೃತ್ವದಲ್ಲಿ ಕಳೆದ ಭಾನುವಾರ (ಫೆಬ್ರವರಿ 18) ಚಂಡೀಗಢದಲ್ಲಿ ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆದಿತ್ತು. ಎಂಎಸ್‌ಪಿ ಕಾನೂನು ಸೇರಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ರೈತರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಂಎಸ್‌ಪಿ ಕುರಿತು ಹೊಸ ಯೋಜನೆ ರೂಪಿಸಿದೆ. ಆದರೆ, ಈ ಪ್ರಸ್ತಾಪವನ್ನು ರೈತರು ತಿರಸ್ಕರಿಸಿ, ಐದು ದಿನಗಳ ವಿರಾಮದ ಬಳಿಕ ಮತ್ತೆ ಪ್ರತಿಭಟನೆ ಆರಂಭಿಸಿದ್ದರು. ಆದರೆ, ಯುವ ರೈತನ ಸಾವಿನ ಹಿನ್ನೆಲೆಯಲ್ಲಿ ಈಗ ಪ್ರತಿಭಟನೆ ನಿಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಆಫರ್ ಏನು?
ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್ ನೀಡಿದೆ. ಮುಂದಿನ ಐದು ವರ್ಷಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯೂ ಕೇಂದ್ರದ ಆಫರ್‌ಗಳಲ್ಲಿ ಸೇರಿದೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು, ಬೇಡಿಕೆಗಳನ್ನು ಈಡೇರಿಸುವ ಮೂಲಕ ಅನ್ನದಾತರ ಪ್ರತಿಭಟನೆ ಶಮನಗೊಳಿಸಲು ಪ್ರಯತ್ನಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ