ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು (MSP) ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶ, ಪಂಜಾಬ್, ಹರಿಯಾಣದ ಸಾವಿರಾರು ರೈತರು ದೆಹಲಿ ಸಮೀಪ ಪ್ರತಿಭಟನೆ (Farmers Protest) ನಡೆಸುತ್ತಿದ್ದಾರೆ. ಪ್ರತಿಭಟನೆಯ 5ನೇ ದಿನವಾದ ಇಂದು (ಫೆಬ್ರವರಿ 17) ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹನ್) ಪಂಜಾಬ್‌ನ ಮೂವರು ಹಿರಿಯ ಬಿಜೆಪಿ ನಾಯಕರ ಮನೆ ಮುಂದೆ ಧರಣಿ ನಡೆಸಿದೆ.
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಬಿಜೆಪಿಯ ಪಂಜಾಬ್ ಘಟಕದ ಮುಖ್ಯಸ್ಥ ಸುನಿಲ್ ಜಖರ್ ಮತ್ತು ಹಿರಿಯ ನಾಯಕ ಕೇವಲ್ ಸಿಂಗ್ ಧಿಲ್ಲಾನ್ ಅವರ ಮನೆಗಳ ಮುಂಭಾಗ ಒಕ್ಕೂಟ ಧರಣಿ ನಡೆಸಿದೆ. ಇದರ ಹೊರತಾಗಿ ರೈತರ ʼದೆಹಲಿ ಚಲೋʼ ಕರೆಗೆ ಬೆಂಬಲ ವ್ಯಕ್ತಪಡಿಸಿ ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ನಡೆಸಲಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ʼದೆಹಲಿ ಚಲೋʼ ಮೆರವಣಿಗೆಯ ಐದನೇ ದಿನದಂದು ರೈತರು ಪಂಜಾಬ್ ಮತ್ತು ಹರಿಯಾಣದ ಎರಡು ಗಡಿ ಸ್ಥಳಗಳಲ್ಲಿ ಉಳಿದುಕೊಂಡಿದ್ದಾರೆ. ವಿವಿಧ ರಾಜ್ಯಗಳ ರೈತರು ಫೆಬ್ರವರಿ 13ರಂದು ದೆಹಲಿಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ್ದರು. ಆದರೆ ಹರಿಯಾಣದೊಂದಿಗಿನ ಪಂಜಾಬ್ ಗಡಿಯ ಶಂಭು ಮತ್ತು ಖನೌರಿ ಪಾಯಿಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದ್ದಾರೆ. ಅಂದಿನಿಂದ ಪ್ರತಿಭಟನಾಕಾರರು ಎರಡು ಗಡಿ ಸ್ಥಳಗಳಲ್ಲಿ ಉಳಿದುಕೊಂಡಿದ್ದಾರೆ. ಹರಿಯಾಣ ಮೂಲದ ಗುರ್ನಾಮ್ ಸಿಂಗ್ ಚಾರುನಿ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಇಂದು ಪ್ರತಿಭಟನಾ ನಿರತ ರೈತರಿಗೆ ಬೆಂಬಲ ನೀಡಲು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿದೆ.
ನಾಳೆ ಸಭೆ
ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ನಾಳೆ (ಫೆಬ್ರವರಿ 18) ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ಫೆಬ್ರವರಿ 8, 12 ಮತ್ತು 15ರಂದು ಎರಡು ಕಡೆಯವರು ಮಾತುಕತೆ ನಡೆಸಿದ್ದರೂ ಫಲ ನೀಡಿರಲಿಲ್ಲ.
‘ಮಹಾಪಂಚಾಯತ್’
ದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಚರ್ಚಿಸಲು ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಶನಿವಾರ ‘ಮಹಾಪಂಚಾಯತ್’ ಆಯೋಜಿಸಲಾಗಿದೆ. ಈ ಮಧ್ಯೆ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಸೇರಿದಂತೆ ಹರಿಯಾಣದ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Delhi Farmers Protest: ಬಗೆಹರಿಯದ ಮಾತುಕತೆ, ಇಂದು ರೈತರ ದಿಲ್ಲಿ ಚಲೋ: ಪೊಲೀಸ್ ಭದ್ರಕೋಟೆಯಾದ ರಾಜಧಾನಿ
ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಶಂಭು ಗಡಿಯಲ್ಲಿ ಹಲವು ರೈತರು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದನ್ನು ತೋರಿಸುವ ಸರಣಿ ವಿಡಿಯೊ ತುಣುಕುಗಳನ್ನು ಹರಿಯಾಣ ಪೊಲೀಸರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ರೈತರ ಆಂದೋಲನದ ಸೋಗಿನಲ್ಲಿ ʼಗಲಾಟೆʼಯನ್ನು ಸಹಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರೈತರೊಂದಿಗಿನ ಘರ್ಷಣೆಯಲ್ಲಿ ಹರಿಯಾಣ ಪೊಲೀಸ್‌ನ 18 ಮತ್ತು ಅರೆ ಸೈನಿಕ ಪಡೆಯ ಏಳು ಜವಾನರು ಸೇರಿದಂತೆ 25 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇತ್ತ ರೈತ ಮುಖಂಡರು ಭದ್ರತಾ ಸಿಬ್ಬಂದಿ ವಿರುದ್ಧ ಆರೋಪ ಹೊರಿಸಿದ್ದಾರೆ. ಹರಿಯಾಣ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಎಸೆಯುವ ಮೂಲಕ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ಬಲ ಪ್ರಯೋಗಿಸಿದ್ದಾರೆ ಎಂದು ದೂರಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ