Site icon Vistara News

Farmers Protest: ತರಕಾರಿ ಪೂರೈಕೆ ಸರಪಳಿ ಅಸ್ತವ್ಯಸ್ತ; ಬೆಲೆ ಏರಿಕೆ ಸಾಧ್ಯತೆ

vegitable shop

vegitable shop

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಮತ್ತೊಂದು ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ (Farmers Protest). ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣದ ಸಾವಿರಾರು ರೈತರು ದೆಹಲಿ ಸಮೀಪ ನಡೆಸುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆ ಆಹಾರ ಸಾಮಗ್ರಿ ಪೂರೈಕೆ ಸರಪಳಿಯ ಮೇಲೆ ಅಡ್ಡ ಪರಿಣಾಮ ಬೀರುವುದರಿಂದ ದೆಹಲಿಯಲ್ಲಿ ತರಕಾರಿ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಪಂಜಾಬ್‌ನಿಂದ ಸಮರ್ಪಕ ಪೂರೈಕೆಯಾಗದ ಕಾರಣ 15 ದಿನಗಳಲ್ಲಿ ಕ್ಯಾರೆಟ್ ಬೆಲೆಯಲ್ಲಿ 4 ರೂ. ಹೆಚ್ಚಳವಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಭಟನೆ ಮುಂದುವರಿದರೆ, ಮತ್ತಷ್ಟು ಅಡೆತಡೆ ಎದುರಾಗಿ ಇತರ ತರಕಾರಿಗಳ ಬೆಲೆಯೂ ಏರಿಕೆಯಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿಯ ಘಾಜಿಪುರ ಮಂಡಿಯ ತರಕಾರಿ ವ್ಯಾಪಾರಿಯೊಬ್ಬರು ಮಾತನಾಡಿ, “ರೈತರ ಪ್ರತಿಭಟನೆಯ ನಂತರ ಪಂಜಾಬ್‌ನಿಂದ ಸಮರ್ಪಕವಾಗಿ ಕ್ಯಾರೆಟ್‌ ಪೂರೈಕೆಯಾಗುತ್ತಿಲ್ಲ. ಹೀಗಾಗಿ 15 ದಿನಗಳಲ್ಲಿ ಕ್ಯಾರೆಟ್ ಬೆಲೆ 4 ರೂ.ಗಳಷ್ಟು ಹೆಚ್ಚಾಗಿದೆ. ಇದು ಇನ್ನಷ್ಟು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಬಹುದುʼʼ ಎಂದು ಹೇಳಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ʼದೆಹಲಿ ಚಲೋʼಗೆ ಕರೆ ನೀಡಿವೆ. ಪಂಜಾಬ್‌ನ ರೈತರು ಫೆ. 13ರಂದು ರಾಷ್ಟ್ರ ರಾಜಧಾನಿ ದೆಹಲಿಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ್ದರು. ಆದರೆ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿಗಳಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ದೆಹಲಿ ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಅಂದಿನಿಂದ ರೈತರು ಗಡಿ ಪ್ರದೇಶಗಳಲ್ಲಿ ಕ್ಯಾಂಪ್‌ ಹೂಡಿದ್ದಾರೆ.

ಘಾಜಿಪುರ ಮಂಡಿಯ ಮತ್ತೊಬ್ಬ ತರಕಾರಿ ವ್ಯಾಪಾರಿ ಮಾತನಾಡಿ, “ಪ್ರತಿಭಟನೆ ಪ್ರಸ್ತುತ ತರಕಾರಿ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿಭಟನೆ ಮುಂದುವರಿದರೆ ಮತ್ತು ಹೆಚ್ಚಿನ ರಸ್ತೆ ತಡೆ ಸಂಭವಿಸಿದರೆ ಉತ್ತರ ಪ್ರದೇಶ, ಗಂಗಾನಗರ, ಪುಣೆ ಇತ್ಯಾದಿ ಸ್ಥಳಗಳ ತರಕಾರಿ ಪೂರೈಕೆ ನಿಲ್ಲಬಹುದು. ಇದು ಕೆಲವು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಬಹುದು. ಆದರೆ ಸದ್ಯಕ್ಕಂತೂ ಈ ಪರಿಸ್ಥಿತಿ ಉದ್ಭವ ಆಗಿಲ್ಲʼʼ ಎಂದು ತಿಳಿಸಿದ್ದಾರೆ.

“ತರಕಾರಿಗಳನ್ನು ಸಾಗಿಸುವ ಟ್ರಕ್‌ಗಳು ಯಾವುದೇ ಅಡೆತಡೆಗಳಿಲ್ಲದೆ ಸಮಯಕ್ಕೆ ಸರಿಯಾಗಿ ದೆಹಲಿಯನ್ನು ತಲುಪುತ್ತಿವೆ. ಹೀಗಾಗಿ ತರಕಾರಿ ಬೆಲೆಗಳ ಮೇಲೆ ಇಲ್ಲಿಯವರೆಗೆ ಪ್ರತಿಭಟನೆ ಯಾವುದೇ ಪರಿಣಾಮ ಬೀರಿಲ್ಲʼʼ ಘಾಜಿಪುರ ಸಗಟು ಮಾರುಕಟ್ಟೆಯ ಇನ್ನೊಬ್ಬ ತರಕಾರಿ ಮಾರಾಟಗಾರ ವಿವರಿಸಿದ್ದಾರೆ.

ಇದನ್ನೂ ಓದಿ: Farmers Protest: 5ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ನಾಳೆ 4ನೇ ಸುತ್ತಿನ ಮಾತುಕತೆ

ನಾಳೆ ಸಭೆ

ಈ ಮಧ್ಯೆ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ನಾಳೆ (ಫೆಬ್ರವರಿ 18) ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಫೆಬ್ರವರಿ 8, 12 ಮತ್ತು 15ರಂದು ಎರಡು ಕಡೆಯವರು ಮಾತುಕತೆ ನಡೆಸಿದ್ದರೂ ಫಲ ನೀಡಿರಲಿಲ್ಲ. ಬೇಡಿಕೆ ಈಡೇರದ ಹೊರತು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತ ಮಖಂಡರು ಈಗಾಗಲೇ ಘೋಷಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version