ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಉತ್ತರ ಪ್ರದೇಶದ ರೈತರು ಗುರುವಾರ (ಫೆಬ್ರವರಿ 9) ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದರಿಂದ ದೆಹಲಿ ಮತ್ತು ನೋಯ್ಡಾವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೆ ಫೆಬ್ರವರಿ 13ರಂದು ಪಂಜಾಬ್ ರೈತರು ʼದೆಹಲಿ ಚಲೋʼ ಮೆರವಣಿಗೆಯನ್ನು(Delhi Chalo march) ಆಯೋಜಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ತಂಡ ರೈತ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿತು. ಶೀಘ್ರ ಇನ್ನೊಂದು ಸುತ್ತಿನ ಮಾತುಕತೆ ನಡೆಲಾಗುವುದು ಎಂದು ಸಚಿವರು ತಿಳಿಸಿದ್ದಾರೆ (Farmers Protest).
ʼʼಕೇಂದ್ರ ಸಚಿವರು ಶೀಘ್ರದಲ್ಲಿಯೇ ಇನ್ನೊಂದು ಸುತ್ತಿನ ಮಾತಿಕತೆ ನಡೆಸುವ ಬಗ್ಗೆ ಭರವಸೆ ನೀಡಿದ್ದಾರೆ. ಹೀಗಿದ್ದರೂ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡದ ಹೊರತು ಫೆಬ್ರವರಿ 13ರಂದು ಆಯೋಜಿಸಿರುವ ದೆಹಲಿ ಚಲೋ ಮೆರವಣಿಗೆಯೊಂದ ಹಿಂದೆ ಸರಿಯುವುದಿಲ್ಲʼʼ ಎಂದು ರೈತ ಮುಖಂಡರು ತಿಳಿಸಿದ್ದಾರೆ. ನಿನ್ನೆ ಚಂಡೀಗಢದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ನಿತ್ಯಾನಂದ ರೈ ಮತ್ತು ಅರ್ಜುನ್ ಮುಂಡ ಭಾಗವಹಿಸಿದ್ದರು. ಜತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಈ ವೇಳೆ ಹಾಜರಿದ್ದರು.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಸುಮಾರು 100 ಹಳ್ಳಿಗಳ ರೈತರು ಗುರುವಾರ ಬೀದಿಗಿಳಿದಿದ್ದರು. ಇದರಿಂದ ದೆಹಲಿ-ಎನ್‌ಸಿಆರ್‌ನ ಹಲವಾರು ಭಾಗಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಮಧ್ಯಾಹ್ನ 12ರಿಂದ 5 ಗಂಟೆಯ ನಡುವೆ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್ ವೇ, ಡಿಎನ್‌ಡಿ ಲೂಪ್, ಕನ್ಲಿಂಡಿ ಕುಂಜ್ ಸೇತುವೆ, ದಲಿತ ಪ್ರೇರಣಾ ಸ್ಥಳ, ಅಟ್ಟಾ ಚೌಕ್ ಮತ್ತು ನೋಯ್ಡಾದ ರಜನಿಗಂಧ ಚೌಕ್ ಸುತ್ತಲೂ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿತ್ತು.
ಸಭೆಯ ಬಗ್ಗೆ ಮಾತನಾಡಿದ ಎಸ್‌ಕೆಎಂ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್, ʼʼಕೇಂದ್ರ ಸಚಿವರೊಂದಿಗೆ ನಡೆಸಿದ ಮಾತುಕತೆ ಧನಾತ್ಮಕವಾಗಿತ್ತು. ನಾವು ನಮ್ಮ ಬೇಡಿಕೆಯನ್ನು ಮಂಡಿಸಿದ್ದೇವೆ. ರೈತರು ಹೇಗೆ ಸಾಲದ ಹೊರೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ನಾವು ಅವರ ಮುಂದಿಟ್ಟಿದ್ದೇವೆ. ಕೇಂದ್ರವು ನಮ್ಮ ಮಾತುಗಳನ್ನು ಆಲಿಸಿದೆ ಮತ್ತು ಕೇಂದ್ರ ಸಚಿವರು ನಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಫೆಬ್ರವರಿ 13ರೊಳಗೆ ಸಭೆ ನಡೆಸುವ ಮೂಲಕ ಕೇಂದ್ರವು ನಮ್ಮ ಸಮಸ್ಯೆಗಳನ್ನು ಪರಿಹರಿಸಿದರೆ ಸರಿ. ಇಲ್ಲದಿದ್ದರೆ ದೆಹಲಿ ಚಲೋ ಮೆರವಣಿಗೆ ನಡೆಸುತ್ತೇವೆʼʼ ಎಂದು ದಲ್ಲೆವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: 777 ಕೋಟಿ ರೂ. ವೆಚ್ಚದ ಪ್ರಗತಿ ಮೈದಾನ ಸುರಂಗ 2 ವರ್ಷದಲ್ಲೇ ಹಾಳಾಯ್ತು; ಭಾರಿ ಟೀಕೆ
ಯಾಕಾಗಿ ಪ್ರತಿಭಟನೆ?
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ರೈತರು ಸರ್ಕಾರ ವಶಪಡಿಸಿಕೊಂಡಿರುವ ತಮ್ಮ ಜಮೀನುಗಳಿಗೆ ಹೆಚ್ಚಿನ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರ ಭಾಗವಾಗಿ ನಿನ್ನೆ ದೆಹಲಿ ಪ್ರವೇಶಿಸಲು ಮುಂದಾಗಿದ್ದರು. ಇನ್ನು ಫೆಬ್ರವರಿ 13ರಂದು ಟ್ರ್ಯಾಕ್ಟರ್ ಮೆರವಣಿಗೆಯನ್ನು ಆಯೋಜಿಸಿರುವ ಹರಿಯಾಣ ಮತ್ತು ಪಂಜಾಬ್ ರೈತರು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು, ರೈತರಿಗೆ ಪಿಂಚಣಿ, ಬೆಳೆ ವಿಮೆ ಮತ್ತು 2020ರ ಪ್ರತಿಭಟನೆಯ ಸಮಯದಲ್ಲಿ ರೈತರ ವಿರುದ್ಧ ದಾಖಲಾದ ಎಫ್ಐಆರ್‌ಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ