Site icon Vistara News

Farmers protest: ಪ್ರತಿಭಟನಾನಿರತ ರೈತ ಶುಭ್ ಕರಣ್ ಸಿಂಗ್ ಮರಣೋತ್ತರ ಪರೀಕ್ಷಾ ವರದಿ ಬಹಿರಂಗ; ಸಾವಿಗೆ ಕಾರಣವಾಗಿದ್ದೇನು?

formers protest

formers protest

ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆದ ರೈತರ ಪ್ರತಿಭಟನೆ ವೇಳೆ ಕಳೆದ ವಾರ ಹರ್ಯಾಣದ ಖಾನೌರಿಯಲ್ಲಿ (Khanauri) ಘರ್ಷಣೆ ಸಂಭವಿಸಿತ್ತು (Farmers protest). ಈ ವೇಳೆ ಪ್ರತಿಭಟನಾ ನಿರತ 24 ವರ್ಷದ ರೈತ ಶುಭ್ ಕರಣ್ ಸಿಂಗ್ (Shubh Karan Singh) ಮೃತಪಟ್ಟಿದ್ದರು. ಇದೀಗ ಇವರ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದ್ದು, ಅದರಲ್ಲಿ ತಲೆಗೆ ಬಂದೂಕಿನ ಗುಂಡಿನಿಂದಾದ ಗಾಯದಿಂದ ಅವರು ಮೃತಪಟ್ಟಿದ್ದಾರೆ ಎನ್ನುವ ವಿಚಾರ ಉಲ್ಲೇಖಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ಮೊದಲು ನಡೆಸಿದ ಸಿಟಿ ಸ್ಕ್ಯಾನ್‌ನಲ್ಲಿ ಶುಭ್ ಕರಣ್ ಸಿಂಗ್ ಅವರ ತಲೆಯಲ್ಲಿ ಹಲವು ಲೋಹದ ತುಂಡುಗಳನ್ನು ಪತ್ತೆಯಾಗಿವೆ. ಮಾತ್ರವಲ್ಲ ಹಲವು ಪ್ರತಿಭಟನಾನಿರತ ರೈತರ ದೇಹದ ಮೇಲೆಯೂ ಲೋಹದ ಉಂಡೆಗಳಿಂದ ಉಂಟಾದ ಗಾಯಗಳು ಕಂಡುಬಂದಿವೆ ಎಂದು ಪಟಿಯಾಲಾದ ಆಸ್ಪತ್ರೆಗಳು ಕಳೆದ ವಾರ ಬಿಡುಗಡೆ ಮಾಡಿದ ವೈದ್ಯಕೀಯ ವರದಿಗಳು ತಿಳಿಸಿವೆ.

ಮರಣೋತ್ತರ ಪರೀಕ್ಷಾ ವರದಿಯಲ್ಲೇನಿದೆ?

ಬುಧವಾರ ನಡೆಸಿದ ಮರಣೋತ್ತರ ಪರೀಕ್ಷೆ ತಲೆಬುರುಡೆಯ ಹಿಂಭಾಗದ ಪ್ರದೇಶ (Occipital region)ದಲ್ಲಿ ಗಾಯದ ಗುರುತು ಕಂಡುಬಂದಿದೆ ಮತ್ತು ಅವರ ದೇಹದಲ್ಲಿ ಬೇರೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ತಿಳಿಸಿದೆ. ವರದಿಯನ್ನು ಪಟಿಯಾಲಾ ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಶುಭ್ ಕರಣ್ ಸಿಂಗ್ ಅವರ ತಲೆ ಬುರುಡೆಯಲ್ಲಿ ಪತ್ತೆಯಾದ ಲೋಹದ ಉಂಡೆಗಳನ್ನೂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದರ ಸಹಾಯದಿಂದ ಶೂಟ್‌ ಮಾಡಲು ಬಳಸಿದ ಬಂದೂಕು ಕಂಡು ಹಿಡಿಯಬಹುದಾಗಿದ್ದು, ಇದಕ್ಕಾಗಿ ಇವುಗಳನ್ನು ಬ್ಯಾಲಿಸ್ಟಿಕ್ಸ್ ತಜ್ಞರಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ ಎಂದು ಹೇಳಿದ್ದಾರೆ.

ಸಿಂಗ್ ಅವರ ಅಂತ್ಯಕ್ರಿಯೆ ಗುರುವಾರ ನಡೆಯಿತು. ಪ್ರತಿಭಟನಾ ನಿರತ ರೈತರು ಮತ್ತು ಸಿಂಗ್ ಅವರ ಕುಟುಂಬವು ಆರಂಭದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಅವಕಾಶ ನೀಡಿರಲಿಲ್ಲ. ಅವರ ಸಾವಿಗೆ ಪೊಲೀಸ್ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಆಗ್ರಹಿಸಿದ್ದರು.

ಬೆಂಬಲ ಬೆಲೆಗೆ ಕಾನೂನು ಖಾತರಿ (ಎಂಎಸ್‌ಪಿ ವಿಧೇಯಕ) ಸೇರಿದಂತೆ 12 ಬೇಡಿಕೆಗಳ ಜಾರಿಗೆ ಆಗ್ರಹಿಸಿ ರೈತರು ಕೈಗೊಂಡಿರುವ ‘ದಿಲ್ಲಿ ಚಲೋ 2.0 ‘ ಚಳುವಳಿ ಕಳೆದ ವಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಫೆಬ್ರವರಿ 21ರಂದು ಪಂಜಾಬ್‌ ಹಾಗೂ ಹರ್ಯಾಣದ ಖಾನೌರಿ, ಅಂಬಾಲಾ ಮತ್ತು ಶಂಭು ಗಡಿಯಿಂದ ದಿಲ್ಲಿಯತ್ತ ಹೊರಟ ರೈತರನ್ನು ಹರ್ಯಾಣ ಪೊಲೀಸರು ತಡೆದಿದ್ದರು. ಹಲವು ಹಂತದ ಬ್ಯಾರಿಕೇಡ್‌ ಕಿತ್ತೆಸೆದು ನುಗ್ಗಲು ಯತ್ನಿಸಿದ್ದರು.

ಇದನ್ನೂ ಓದಿ: Farmers Protest: ಹರಿಯಾಣ ಪೊಲೀಸರ ಏಟಿಗೆ ಪ್ರತಿಭಟನಾನಿರತ ಯುವ ರೈತ ಸಾವು

ಟ್ರ್ಯಾಕ್ಟರ್‌ಗಳ ಮೂಲಕ ಬ್ಯಾರಿಕೇಡ್‌ ದಾಟಲು ಯತ್ನಿಸಿದ ರೈತರನ್ನು ತಡೆಯಲು ಪೊಲೀಸರು ಮೂರು ಬಾರಿ ಅಶ್ರುವಾಯು ಸಿಡಿಸಿದ್ದರು. ಈ ವೇಳೆ ಗಾಯಗೊಂಡ ಶುಭ್‌ ಕರಣ್‌ ಸಿಂಗ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೆಲವು ದಿನಗಳ ಹಿಂದೆ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರದಿಂದ 1 ಕೋಟಿ ರೂಪಾಯಿ ಆರ್ಥಿಕ ನೆರವನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version