Site icon Vistara News

Farmers Protest: ರೈತರ ಪ್ರತಿಭಟನೆ ಹಿನ್ನೆಲೆ; ಫೆ. 24ರವರೆಗೆ ಇಂಟರ್‌ನೆಟ್‌ ಸೇವೆ ಸ್ಥಗಿತ

protest

protest

ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು (MSP) ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣದ ಸಾವಿರಾರು ರೈತರು ದೆಹಲಿ ಸಮೀಪ ನಡೆಸುತ್ತಿರುವ ಪ್ರತಿಭಟನೆ (Farmers Protest) 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಫೆಬ್ರವರಿ 18) ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ 4ನೇ ಸುತ್ತಿನ ಮಾತುಕತೆ ನಡೆಸಲಿದೆ. ಈ ಮಧ್ಯೆ ರೈತರ ಪ್ರತಿಭಟನೆ ಕಾರಣದಿಂದ ಹರಿಯಾಣದ ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿದ್ದ ಸರ್ಕಾರ ಇದೀಗ ಪಂಜಾಬ್‌ನ ಕೆಲವು ಪ್ರದೇಶಗಳಲ್ಲಿಯೂ ಇಂಟರ್‌ನೆಟ್‌ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಸೇರಿದಂತೆ ಪಂಜಾಬ್‌ನ ವಿವಿಧ ಜಿಲ್ಲೆಗಳು ಫೆಬ್ರವರಿ 24ರ ವರೆಗೆ ಇಂಟರ್ನೆಟ್ ಬ್ಲಾಕ್ ಔಟ್‌ (Internet blackout)ಗೆ ಒಳಗಾಗಲಿವೆ. ಆರಂಭದಲ್ಲಿ ರೈತ ಮುಖಂಡರು ಕರೆ ನೀಡಿದ್ದ ‘ದೆಹಲಿ ಚಲೋ’ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 12ರಿಂದ 16ರ ವರೆಗೆ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿದ್ದ ಸರ್ಕಾರ ಬಳಿಕ ಇದನ್ನು ಮುಂದುವರಿಸಿತ್ತು.

ಫೆಬ್ರವರಿ 16ರ ಆದೇಶದ ಪ್ರಕಾರ ಪಂಜಾಬ್‌ನ ಪಟಿಯಾಲಾದ ಶಂಭು, ಜುಲ್ಕನ್, ಪಸಿಯಾನ್, ಪತ್ರಾನ್, ಶತ್ರಾನಾ, ಸಮನಾ, ಘನೌರ್, ದೇವಿಘರ್ ಮತ್ತು ಬಲ್ಭೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶ, ಮೊಹಾಲಿಯ ಲಾಲ್ರು ಪೊಲೀಸ್ ಠಾಣೆ, ಬಟಿಂಡಾದ ಸಂಗತ್ ಪೊಲೀಸ್ ಠಾಣೆ, ಮುಕ್ತಸರ್ನ ಕಿಲಿಯನ್ವಾಲಿ ಪೊಲೀಸ್ ಠಾಣೆ, ಮಾನ್ಸಾದ ಸರ್ದುಲ್ಘರ್, ಬೋಹಾ ಮತ್ತು ಫತೇಘರ್ ಸಾಹಿಬ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲು ಕೇಂದ್ರವು 1885ರ ಟೆಲಿಗ್ರಾಫ್ ಕಾಯ್ದೆಯಡಿ ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಂಡಿದೆ.

ಫೆಬ್ರವರಿ 15ರಂದು ಚಂಡೀಗಢದಲ್ಲಿ ನಡೆದ ಮೂವರು ಕೇಂದ್ರ ಸಚಿವರು ಮತ್ತು ರೈತ ಮುಖಂಡರ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಯ್ದ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Delhi Farmers Protest: ದಿಲ್ಲಿ ಗಡಿಗಳಲ್ಲಿ ಬೀಡುಬಿಟ್ಟ ಸಹಸ್ರಾರು ರೈತರು, ಇಂದು ಪೊಲೀಸ್‌ ಕಾವಲು ಮುರಿದು ಒಳನುಗ್ಗಲು ಯತ್ನ

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ʼದೆಹಲಿ ಚಲೋʼ ಮೆರವಣಿಗೆಗೆ ಕರೆ ನೀಡಿವೆ. ಅದರಂತೆ ವಿವಿಧ ರಾಜ್ಯಗಳ ರೈತರು ಫೆಬ್ರವರಿ 13ರಂದು ದೆಹಲಿಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ್ದರು. ಆದರೆ ಹರಿಯಾಣದೊಂದಿಗಿನ ಪಂಜಾಬ್‌ ಗಡಿಯ ಶಂಭು ಮತ್ತು ಖನೌರಿ ಪಾಯಿಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದ್ದಾರೆ. ಅಂದಿನಿಂದ ಪ್ರತಿಭಟನಾಕಾರರು ಎರಡು ಗಡಿ ಸ್ಥಳಗಳಲ್ಲಿ ಉಳಿದುಕೊಂಡಿದ್ದಾರೆ. ಎಂಎಸ್‌ಪಿ, ಕೃಷಿ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸಿನ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎನ್ನುವುದು ರೈತರ ಆಗ್ರಹ. ಬೇಡಿಕೆ ಈಡೇರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರೈತ ಮುಖಂಡರು ಘೋಷಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version