Site icon Vistara News

Farmers Protest: ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ದಿಢೀರ್‌ ಸ್ಥಗಿತ; ಕೇಂದ್ರದ ಆಫರ್‌ ಏನು?

Farmers Protest

Farmers' put 'Delhi Chalo' march on hold to study new MSP plan proposed by Centre

ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಹಾಗೂ ಕೇಂದ್ರ ಸರ್ಕಾರ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆಯು ಆರಂಭಿಕವಾಗಿ ಯಶಸ್ಸು ಕಂಡಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ (Minimum Support Price) ನೀಡುವ ಕುರಿತು ಕೇಂದ್ರ ಸರ್ಕಾರ (Central Government) ಹೊಸ ಯೋಜನೆ ರೂಪಿಸಿದ್ದು, ಇದರ ಕುರಿತು ಅಧ್ಯಯನ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಹಾಗಾಗಿ, ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ (Farmers Protest) ಎರಡು ದಿನಗಳವರೆಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ.

ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಅರ್ಜುನ್‌ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್‌ ಗೋಯಲ್‌ ಹಾಗೂ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರೈ ಅವರ ನೇತೃತ್ವದಲ್ಲಿ ಭಾನುವಾರ (ಫೆಬ್ರವರಿ 18) ಚಂಡೀಗಢದಲ್ಲಿ ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆದಿದೆ. ಎಂಎಸ್‌ಪಿ ಕಾನೂನು ಸೇರಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ರೈತರು ಆಗ್ರಹಿಸಿದ್ದು, ಕೇಂದ್ರ ಸರ್ಕಾರವು ಎಂಎಸ್‌ಪಿ ಕುರಿತು ಹೊಸ ಯೋಜನೆ ರೂಪಿಸಿದೆ.

ರೈತರ ಮುಂದಿನ ನಡೆ ಏನು?

ಕೇಂದ್ರ ಸರ್ಕಾರವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕುರಿತು ರೂಪಿಸುತ್ತಿರುವ ಹೊಸ ಯೋಜನೆಯ ಬಗ್ಗೆ ಅಧ್ಯಯನ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. “ಕೇಂದ್ರದ ಯೋಜನೆ ಕುರಿತು ಕೃಷಿ ತಜ್ಞರ ಜತೆ ಚರ್ಚಿಸುತ್ತೇವೆ. ಫೆಬ್ರವರಿ 19 ಹಾಗೂ 20ರಂದು ಇದರ ಕುರಿತು ಅಧ್ಯಯನ ನಡೆಸಿ, ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ರೈತ ಮುಖಂಡ ಸರ್ವಾನ್‌ ಸಿಂಗ್‌ ಪಂಢೇರ್‌ ತಿಳಿಸಿದ್ದಾರೆ. ಹಾಗಾಗಿ, ಫೆಬ್ರವರಿ 19 ಹಾಗೂ 20ರಂದು ಪ್ರತಿಭಟನೆ ನಡೆಸುವುದಿಲ್ಲ. ಫೆಬ್ರವರಿ 21ರಂದು ಬೆಳಗ್ಗೆ ಪ್ರತಿಭಟನೆ ಆರಂಭಿಸುವ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Tumkur News: ಹೂವಿನ ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ: ಹೂವು ವ್ಯಾಪಾರಿಗಳಿಂದ ಪ್ರತಿಭಟನೆ

ಕೇಂದ್ರ ಸರ್ಕಾರದ ಆಫರ್‌ ಏನು?

ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್‌ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್‌ ನೀಡಿದೆ. ಮುಂದಿನ ಐದು ವರ್ಷಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯೂ ಕೇಂದ್ರದ ಆಫರ್‌ಗಳಲ್ಲಿ ಸೇರಿದೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು, ಬೇಡಿಕೆಗಳನ್ನು ಈಡೇರಿಸುವ ಮೂಲಕ ಅನ್ನದಾತರ ಪ್ರತಿಭಟನೆ ಶಮನಗೊಳಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version