Site icon Vistara News

ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳಿಂದ ಫಾರೂಖ್‌ ಅಬ್ದುಲ್ಲಾ ಹೆಸರು ಪ್ರಸ್ತಾಪಕ್ಕೆ ನೆಟ್ಟಿಗರು ಕಿಡಿ

farroq abdula and NC

ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ಫಾರೂಖ್‌ ಅಬ್ದುಲ್ಲಾ ಅವರ ಹೆಸರನ್ನು ಪ್ರಸ್ತಾಪಿಸಿರುವ ಪ್ರತಿಪಕ್ಷಗಳ ವರ್ತನೆಗೆ ಜಾಲತಾಣಗಳಲ್ಲಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫಾರೂಖ್‌ ಅಬ್ದುಲ್ಲಾ ಅವರನ್ನು ಸೂಚಿಸಿದ್ದೇಕೆ ಎಂದು ಚರ್ಚೆಯಾಗುತ್ತಿದೆ.

ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ನಡೆದ 17 ಪಕ್ಷಗಳ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಹಾತ್ಮಾಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅಥವಾ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಫಾರೂಕ್‌ ಅಬ್ದುಲ್ಲಾ ಹೆಸರನ್ನು ಸೂಚಿಸಿದ್ದಾರೆ.

ಜಾಲತಾಣಗಳಲ್ಲಿ ನೆಟ್ಟಿಗರು, ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ಫಾರೂಕ್‌ ಅಬ್ದುಲ್ಲಾ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

” ಫಾರೂಖ್‌ ಅಬ್ದುಲ್ಲಾ ಅವರಿಗೆ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಲು ಯಾವ ರಚನಾತ್ಮಕ ಅರ್ಹತೆ ಇದೆ? ಅವರು ಪಾಕಿಸ್ತಾನದಿಂದ ಬಂದಿದ್ದ ಹಿಂದೂ ನಿರಾಶ್ರಿತರಿಗೆ ಆಶ್ರಯ ನೀಡಲು ನಿರಾಕರಿಸಿದ್ದರುʼʼ ಎಂದು ಚಿಂತಕ, ಅಂಕಣಕಾರ ಪ್ರಫುಲ್ಲ ಕೇಳ್ಕರ್‌ ಹೇಳಿದ್ದಾರೆ. ಕಾಶ್ಮೀರಿ ಪಂಡಿತರು ಕೂಡ ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.

” ಫಾರೂಖ್‌ ಅಬ್ದುಲ್ಲಾ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸುವ ಮೂಲಕ ಪ್ರತಿಪಕ್ಷಗಳು ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿವೆ. ಜಮ್ಮು ಕಾಶ್ಮೀರ ಮತ್ತು ಭಾರತದ ಇತರ ಭಾಗದ ವಾಸ್ತವ ಪರಿಸ್ಥಿತಿ ಬಗ್ಗೆ ಅವುಗಳಿಗೆ ಅರಿವು ಇಲ್ಲʼʼ ಎಂದು ರಾಜೇಶ್‌ ಎಂಬುವರು ಕಿಡಿ ಕಾರಿದ್ದಾರೆ.

” ಭಯೋತ್ಪಾದಕ ಯಾಸಿನ್‌ ಮಲ್ಲಿಕ್‌ ಜತೆ ಹೆಗಲ ಮೇಲೆ ಕೈ ಹಾಕುವಷ್ಟು ಆಪ್ತರಾಗಿದ್ದ ಫಾರೂಖ್‌ ಅಬ್ದುಲ್ಲಾ ಅವರನ್ನು ರಾಷ್ಟ್ರಪತಿ ಹುದ್ದೆಗೆ ಕ್ಯಾಂಡಿಡೇಟ್‌ ಮಾಡುತ್ತಿದ್ದೀರಾ ದೀದಿ?ʼʼ ಎಂದು ಎಂಡಿ ಕುಮಾರ್‌ ಎಂಬುವರು ಟೀಕಿಸಿದ್ದಾರೆ.

” ಕಾಶ್ಮೀರದಲ್ಲಿ 1990ರಲ್ಲಿ ಪಂಡಿತರ ಭೀಕರ ನರಮೇಧ ಸಂಭವಿಸಿದಾಗ ಇದೇ ಫಾರೂಖ್‌ ಅಬ್ದುಲ್ಲಾ ಲಂಡನ್‌ನಲ್ಲಿ ಗಾಲ್ಫ್‌ ಆಡುತ್ತಿದ್ದರು. ಇಂಥವರನ್ನು ಪ್ರತಿಪಕ್ಷಗಳು ರಾಷ್ಟ್ರಪತಿ ಹುದ್ದೆಗೆ ಸೂಚಿಸುತ್ತಿವೆʼʼ ಎಂದು ಆದಿತ್ಯ ರಾಜ್‌ ಕೌಲ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆ ಉಪರಾಷ್ಟ್ರಪತಿ ಹುದ್ದೆಗೆಕಾಂಗ್ರೆಸ್‌ ಗೋಪಾಲಕೃಷ್ಣ ಗಾಂಧಿ ಅವರನ್ನು ಕಣಕ್ಕಿಳಿಸಿದ್ದಾಗ, ಶಿಸೇನೆ ಟೀಕಿಸಿತ್ತು. ಉಗ್ರ ಯಾಕೂಬ್‌ ಮೆಮನ್‌ಗೆ ಮರಣದಂಡನೆ ಮಾಡದಿರುವಂತೆ 2015ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಪತ್ರ ಬರೆದಿದ್ದ ಗೋಪಾಲಕೃಷ್ಣ ಗಾಂಧಿ ಅವರನ್ನು ಕಾಂಗ್ರೆಸ್‌ ಉಪ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿಸಿದೆ ಎಂದು ಶಿವಸೇನೆ ಆರೋಪಿಸಿತ್ತು.

Exit mobile version