ಶ್ರೀನಗರ: ಭಾರತ್ ಜೋಡೋ ಯಾತ್ರೆಯ ಕೊನೆಯ ಹಂತದಲ್ಲಿರುವ ಕಾರಣ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ (Rahul Gandhi) ಅವರು ಜಮ್ಮು-ಕಾಶ್ಮೀರ ತಲುಪಿದ್ದಾರೆ. ಇದರ ಬೆನ್ನಲ್ಲೇ, ನ್ಯಾಷನಲ್ ಕಾನ್ಫರೆನ್ಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ರಾಹುಲ್ ಗಾಂಧಿ ಅವರನ್ನು ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರಿಗೆ ಹೋಲಿಸಿದ್ದಾರೆ.
ಜಮ್ಮು-ಕಾಶ್ಮೀರದ ಲಖನ್‌ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. “ಆದಿ ಶಂಕರಾಚಾರ್ಯರ ನಂತರ ರಾಹುಲ್ ಗಾಂಧಿ ಅವರು ಮಾತ್ರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಕೈಗೊಂಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಭಾರತದಾದ್ಯಂತ ದ್ವೇಷವನ್ನು ಹರಡಿಸಲಾಗುತ್ತಿದೆ. ಒಂದು ಕಾಲದಲ್ಲಿ ಗಾಂಧೀಜಿಯವರ ಭಾರತ ಹಾಗೂ ಶ್ರೀರಾಮನ ಭಾರತವು ಎಲ್ಲರೂ ಒಂದೇ ಎಂಬುದಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಆದರೆ, ರಾಹುಲ್ ಗಾಂಧಿಯವರು ಕೈಗೊಳ್ಳುತ್ತಿರುವ ಯಾತ್ರೆಯು ಭಾರತವನ್ನು ಒಗ್ಗೂಡಿಸುವುದಾಗಿದೆ” ಎಂದರು. ಇದಕ್ಕೂ ಮೊದಲು, ಕಾಂಗ್ರೆಸ್ ನಾಯಕರ ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿ ಅವರನ್ನು ಶ್ರೀರಾಮನಿಗೆ ಹೋಲಿಸಿದ್ದರು.
ಇದನ್ನೂ ಓದಿ | Congress BJP Spar | ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ ಕಾಂಗ್ರೆಸ್, ಹಿಂದುಗಳ ಭಾವನೆಗಳಿಗೆ ಅವಮಾನ ಎಂದ ಬಿಜೆಪಿ