Site icon Vistara News

Gujarat ATS: ಉಗ್ರ ಕೃತ್ಯ; ಹೈದರಾಬಾದ್​ನಲ್ಲಿ ಅಪ್ಪ-ಮಗಳನ್ನು ಬಂಧಿಸಿದ ಗುಜರಾತ್​ ಎಟಿಎಸ್

terror organisation

ಹೈದರಾಬಾದ್​​ನಲ್ಲಿ ಭಯೋತ್ಪಾದಕ ಸಂಘಟನೆ(Terror Organisation)ಯೊಂದರ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದಡಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (Gujarat Anti Terrorists Squad)ದವರು ತಂದೆ-ಮಗಳನ್ನು ಬಂಧಿಸಿದ್ದಾರೆ. ಸಾಫ್ಟ್​ವೇರ್ ಎಂಜಿನಿಯರ್ ಆಗಿರುವ ಮೊಹಮ್ಮದ್ ಜಾವೇದ್ (46) ಮತ್ತು ಅವರ ಮಗಳು ಖತೀಜಾ (20) ಬಂಧಿತರು. ಇವರಿಬ್ಬರನ್ನೂ ತೆಲಂಗಾಣದ ಗೋದಾವರಿಖಣಿಯ ಶ್ರೀನಗರ ಕಾಲನಿ ನಿವಾಸಿಗಳಾಗಿದ್ದಾರೆ.

ಮೊಹಮ್ಮದ್ ಜಾವೇದ್​ ಮತ್ತು ಖತೀಜಾ ಅವರು ಮೂಲತಃ ಹೈದರಾಬಾದ್​ನ ಟೋಲಿಚೌಕಿ ಏರಿಯಾದವರು. ಕಳೆದ ನಾಲ್ಕು ದಿನಗಳ ಹಿಂದೆ ತೆಲಂಗಾಣದ ರಾಮಗುಂಡಮ್​​ನಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದರು. ಅಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಬಳಿಕ ಅಲ್ಲೇ ತಂಗಿದ್ದರು. ಆದರೆ ಇವರಿಬ್ಬರೂ ಉಗ್ರಸಂಘಟನೆಯೊಂದರ ಸಿದ್ಧಾಂತಗಳನ್ನು ಜನರ ತಲೆಗೆ ತುಂಬುತ್ತಿದ್ದಾರೆ. ಈ ಮೂಲಕ ಯುವಕರನ್ನು ಭಯೋತ್ಪಾದನಾ ಸಂಘಟನೆಯತ್ತ ಸೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿಸಿ ಗುಜರಾತ್ ಎಟಿಎಸ್​ಗೆ ಸಿಕ್ಕಿದ್ದರಿಂದ, ಇದರ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು.

ಇದನ್ನೂ ಓದಿ: ಪಾಕಿಸ್ತಾನಿ ಏಜೆಂಟ್​ಗೆ ಗುಪ್ತ ಮಾಹಿತಿ ರವಾನೆ; ಡಿಆರ್​ಡಿಒ ಹಿರಿಯ ನಿರ್ದೇಶಕನನ್ನು ಬಂಧಿಸಿದ ಮಹಾರಾಷ್ಟ್ರ ಎಟಿಎಸ್​

ಮೊಹಮ್ಮದ್ ಜಾವೇದ್​ ಮತ್ತು ಅವರ ಮಗಳು ಖತೀಜಾ ತಮ್ಮ ಸಂಬಂಧಿಕರ ಮನೆಗೆ ಹೋದಾಗ ಇತ್ತ ಅವರ ಟೋಲಿಚೌಕಿಯಲ್ಲಿರುವ ಮನೆ ಮೇಲೆ ಗುಜರಾತ್ ಎಟಿಎಸ್​ ಅಧಿಕಾರಿಗಳ ರೇಡ್ ಮಾಡಿದ್ದರು. ಅಲ್ಲಿಂದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು, ಸ್ಥಳೀಯ ಪೊಲೀಸರ ಸಹಾಯ ಪಡೆದು ರಾಮಗುಂಡಮ್​​ಗೆ ಬಂದಿದ್ದರು. ಅಪ್ಪ-ಮಗಳನ್ನು ಅವರ ಸಂಬಂಧಿಕರ ಮನೆಯಲ್ಲೇ ಅರೆಸ್ಟ್ ಮಾಡಿದ್ದಾರೆ. ಇನ್ನೂ ಕೆಲವು ಕೇಸ್​ಗಳಲ್ಲಿ ತಂದೆ-ಮಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇಸ್ಲಾಮಿಕ್ ಸ್ಟೇಟ್​ ಆಫ್​ ಖೊರಾಸನ್​ ಪ್ರಾಂತ್ಯ ಭಯೋತ್ಪಾದಕ ಸಂಘಟನೆಗೆ ಸಂಬಂಧಪಟ್ಟ ಕೇಸ್​​ನಡಿ ಗುಜರಾತ್​​ನ ಎಟಿಎಸ್​ ಹೈದರಾಬಾದ್​ನ ವಿವಿಧೆಡೆ ಮಂಗಳವಾರದಿಂದಲೂ ಶೋಧ ಕಾರ್ಯ ನಡೆಸುತ್ತಿದೆ. ಅದು ಇಂದು ಕೂಡ ಮುಂದುವರಿದಿದೆ. ಇದೇ ಸಂಘಟನೆಯ ಸಿದ್ಧಾಂತಗಳನ್ನು ತಂದೆ-ಮಗಳು ಬಿತ್ತರಿಸುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

Exit mobile version