Site icon Vistara News

ಮುಸ್ಲಿಂ ಕ್ಷೌರಿಕರಿಂದ ಇಬ್ಬರು ಮಕ್ಕಳ ಹತ್ಯೆ; ದುಃಖ ತಾಳದೆ ಆತ್ಮಹತ್ಯೆಗೆ ಯತ್ನಿಸಿದ ತಂದೆ

Vinod Singh Budaun

Father of Budaun murder victims' attempts to Suicide; sets bike on fire

ಲಖನೌ: ಉತ್ತರ ಪ್ರದೇಶದ (Uttar Pradesh) ಬದೌನ್‌ನಲ್ಲಿ ಮಾರ್ಚ್‌ 19ರಂದು ಇಬ್ಬರು ಮುಸ್ಲಿಂ ಕ್ಷೌರಿಕರು ಇಬ್ಬರು ಮಕ್ಕಳ ಕತ್ತು ಸೀಳಿ ಹತ್ಯೆ (Budaun Murder Case) ಮಾಡಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಬಾಲಕರನ್ನು ಕೊಂದ ಸಾಜಿದ್‌ನನ್ನು ಎನ್‌ಕೌಂಟರ್‌ (Encounter) ಮಾಡಲಾಗಿದ್ದು, ಈತನ ಸಹೋದರ ಮೊಹಮ್ಮದ್‌ ಜಾವೇದ್‌ನನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಇಬ್ಬರು ಮಕ್ಕಳ ತಂದೆ ವಿನೋದ್‌ ಸಿಂಗ್‌ (Vinod Singh) ಅವರು ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಮ್ಮ ಇಬ್ಬರು ಮಕ್ಕಳನ್ನು ಕೊಂದು ಆರು ದಿನ ಕಳೆದಿವೆ. ಆದರೆ, ಇದುವರೆಗೆ ಸಾಜಿದ್‌ ಹಾಗೂ ಜಾವೇದ್‌ ಏಕೆ ತಮ್ಮ ಮಕ್ಕಳನ್ನು ಕೊಂದರು ಎಂಬುದಕ್ಕೆ ಕಾರಣವೇ ಸಿಗುತ್ತಿಲ್ಲ. ಇದರಿಂದ ಬೇಸರಗೊಂಡ ವಿನೋದ್‌ ಸಿಂಗ್‌ ಅವರು ಬೈಕ್‌ಗೆ ಬೆಂಕಿ ಹಚ್ಚಿ, ತಾವೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಬಂದು ವಿನೋದ್‌ ಸಿಂಗ್‌ ಅವರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

“ಆಯುಷ್‌ ಹಾಗೂ ಅಹಾನ್‌ನನ್ನು ಕೊಂದು ಆರು ದಿನ ಕಳೆದಿವೆ. ಇದುವರೆಗೆ ಏಕೆ ಸಾಜಿದ್‌ ಹಾಗೂ ಜಾವೇದ್‌ ಮಕ್ಕಳನ್ನು ಕೊಂದರು ಎಂಬುದೇ ಗೊತ್ತಾಗುತ್ತಿಲ್ಲ. ಪೊಲೀಸರು ಏನೋ ಮುಚ್ಚಿಡುತ್ತಿದ್ದಾರೆ. ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ಕೊರಗು ವಿನೋದ್‌ ಸಿಂಗ್‌ನನ್ನು ಕಾಡುತ್ತಿದೆ. ಹಾಗಾಗಿ, ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ” ಎಂದು ವಿನೋದ್‌ ಸಿಂಗ್‌ ಅವರ ತಾಯಿ ತಿಳಿಸಿದ್ದಾರೆ.

11 ವರ್ಷದ ಆಯುಷ್‌ ಹಾಗೂ 6 ವರ್ಷದ ಅಹಾನ್‌ನನ್ನು ಕೊಂದ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಬಳಿಕ ಮೊಹಮ್ಮದ್‌ ಜಾವೇದ್‌ ತಲೆಮರೆಸಿಕೊಂಡಿದ್ದ. ಆದರೆ, ನಿನ್ನನ್ನು ಎನ್‌ಕೌಂಟರ್‌ ಮಾಡುವುದಿಲ್ಲ, ಶರಣಾಗು ಎಂದು ಪೊಲೀಸರು ಮನವಿ ಮಾಡಿದ್ದರು. ಅದರಂತೆ, ಆರೋಪಿ ಮೊಹಮ್ಮದ್‌ ಜಾವೇದ್ ಬರೇಲಿಯ ಬರದಾರಿಯಲ್ಲಿರುವ ಸ್ಯಾಟಲೈಟ್‌ ಪೊಲೀಸ್‌ ಠಾಣೆಯಲ್ಲಿ ಶರಣಾಗಿದ್ದಾನೆ. “ಮೊಹಮ್ಮದ್‌ ಜಾವೇದ್‌ನನ್ನು ಬರೇಲಿಯಿಂದ ಬದೌನ್‌ಗೆ ಕರೆತರಲಾಗುತ್ತಿದೆ. ಭೀಕರ ಹತ್ಯೆಗೆ ಏನು ಕಾರಣ ಎಂಬ ಕುರಿತು ವಿಚಾರಣೆ ನಡೆಸಲಾಗುತ್ತದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 19ರಂದು ಏನಾಯಿತು?

ಕೊಲೆಗಾರ ಸಾಜಿದ್, ಸಂತ್ರಸ್ತರ ಮನೆಯ ಎದುರು ಕ್ಷೌರದ ಅಂಗಡಿಯನ್ನು ನಡೆಸುತ್ತಿದ್ದ. ಮಕ್ಕಳ ತಂದೆ ವಿನೋದ್ ಅವರಿಗೆ ಆತನ ಪರಿಚಯವಿತ್ತು. ಮಂಗಳವಾರ (ಮಾರ್ಚ್‌ 19) ಸಂಜೆ ಸಾಜಿದ್, ವಿನೋದ್‌ ಮನೆಗೆ ಭೇಟಿ ನೀಡಿದ್ದ. ಆಗ ವಿನೋದ್ ಮನೆಯಲ್ಲಿ ಇರಲಿಲ್ಲ. ವಿನೋದ್ ಅವರ ಪತ್ನಿ ಸಂಗೀತಾ ಅವರಿಗೆ, ತನ್ನ ಗರ್ಭಿಣಿ ಪತ್ನಿ ಆಸ್ಪತ್ರೆಯಲ್ಲಿದ್ದು, ಆಕೆಯ ಚಿಕಿತ್ಸೆಗೆ ₹5,000 ಅಗತ್ಯವಿದೆ ಎಂದು ಸಾಜಿದ್‌ ಹೇಳಿದ್ದಾನೆ. ಸಂಗೀತಾ ಪತಿ ವಿನೋದ್‌ಗೆ ಫೋನ್ ಮಾಡಿದ್ದಾಳೆ. ಹಣ ಕೊಡುವಂತೆ ವಿನೋದ್‌ ಪತ್ನಿಗೆ ಸೂಚಿಸಿದ್ದಾರೆ.

ಸಂಗೀತಾ ಹಣವನ್ನು ಸಾಜಿದ್‌ಗೆ ಕೊಟ್ಟು, ಆತನಿಗೆ ಚಹಾ ಮಾಡಲೆಂದು ಕಿಚನ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಮೂವರು ಮಕ್ಕಳ ಮೇಲೆ ದಾಳಿ ನಡೆಸಿದ್ದ. ಮೊದಲು ಸಾಜಿದ್, ವಿನೋದ್‌ನ ಹಿರಿಯ ಮಗ 11 ವರ್ಷದ ಆಯುಷ್‌ಗೆ ಮೇಲಿನ ಮಹಡಿಯಲ್ಲಿರುವ ಆತನ ತಾಯಿಯ ಬ್ಯೂಟಿ ಸಲೂನ್ ಅನ್ನು ತೋರಿಸಲು ಕೇಳಿದ್ದಾನೆ. ಹುಡುಗ ಅವನನ್ನು ಎರಡನೇ ಮಹಡಿಗೆ ಕರೆದೊಯಿದ್ದ. ಎರಡನೇ ಮಹಡಿಯಲ್ಲಿ ಸಾಜಿದ್ ಲೈಟ್ ಆಫ್ ಮಾಡಿ ಆಯುಷ್ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ.

ಇದನ್ನೂ ಓದಿ: Murder case : ಚಿಕ್ಕಬಳ್ಳಾಪುರದಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

ಅಷ್ಟರಲ್ಲಿ ಆಯುಷ್‌ನ ಕಿರಿಯ ಸಹೋದರ ಅಹಾನ್ (6) ಒಳಗೆ ಬಂದಿದ್ದು, ಅಹಾನ್‌ನನ್ನು ಕೂಡ ಸಾಜಿದ್ ಹಿಡಿದು ಅದೇ ರೀತಿಯಲ್ಲಿ ಕೊಂದಿದ್ದಾನೆ. ಅದನ್ನು ಇನ್ನೊಬ್ಬ ಸಹೋದರ ಪಿಯೂಷ್ ನೋಡಿದ್ದಾನೆ. ಪಿಯೂಷ್‌ ಮೇಲೆ ಸಾಜಿದ್‌ ದಾಳಿ ಮಾಡುವಷ್ಟರಲ್ಲಿ ಏಳು ವರ್ಷದ ಆ ಮಗು ಓಡಿಹೋಗಿ ಅಡಗಿಕೊಂಡಿದ್ದಾನೆ. ಆಯುಷ್ ಮತ್ತು ಅಹಾನ್ ಮೃತಪಟ್ಟಿದ್ದಾರೆ. ಪಿಯೂಷ್‌ಗೆ ಸಣ್ಣ ಗಾಯಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version