ಲಖನೌ: ಯಾವುದೇ ತಂದೆಗೆ ತನ್ನ ಕಣ್ಣೆದುರು ಮಗಳಿಗೆ ಅನ್ಯಾಯ ಆಗುವುದಿರಲಿ, ಸಣ್ಣ ನೋವಾದರೂ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ (Uttar Pradesh) ಅತ್ಯಾಚಾರದ ಬಳಿಕ ಮಗಳು ಕೊಲೆಗೀಡಾದ ಕೆಲವೇ ದಿನಗಳ ಅಂತರದಲ್ಲಿ ತಂದೆಯೂ ನೇಣಿಗೆ ಕೊರಳೊಡ್ಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ (Kanpur District) ಸಿಸೋಲರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ತಂದೆಯು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
“ಸಿಸೋಲರ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಬಳಿ 45 ವರ್ಷದ ವ್ಯಕ್ತಿಯ ದೇಹವು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ದೊರೆತಿದೆ. ಬುಧವಾರ (ಮಾರ್ಚ್ 6) ಅವರ ಶವ ದೊರೆತಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಕಾನ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಾ ಶರ್ಮಾ ಮಾಹಿತಿ ನೀಡಿದ್ದಾರೆ. ಹಮೀರ್‌ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತಿಳಿದುಬಂದರೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಕಾನ್ಪುರ ಜಿಲ್ಲೆಯ ಸಿಸೋಲರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಬಾಲಕಿಯರು ಫೆಬ್ರವರಿ 28ರಂದು ನಾಪತ್ತೆಯಾಗಿದ್ದರು. ಒಬ್ಬಳಿಗೆ 16 ವರ್ಷ ವಯಸ್ಸಾದರೆ, ಇನ್ನೊಬ್ಬಳಿಗೆ 14 ವರ್ಷ ವಯಸ್ಸಾಗಿತ್ತು. ಗ್ರಾಮದ ಬಳಿಯೇ ಇಟ್ಟಿಗೆ ತಯಾರಿಸುವ ಜಾಗವಿದ್ದು, ಅಲ್ಲಿಂದ 400 ಮೀಟರ್ ದೂರದಲ್ಲಿರುವ ಮರಕ್ಕೆ ಇಬ್ಬರೂ ಬಾಲಕಿಯರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಇದಾದ ಬಳಿಕ ಇಬ್ಬರೂ ಬಾಲಕಿಯರು ಅತ್ಯಾಚಾರಕ್ಕೀಡಾಗಿದ್ದು, ನಂತರ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಇದನ್ನೂ ಓದಿ: Actress Vijayalakshmi: ಇದು ನನ್ನ ಕೊನೆಯ ವಿಡಿಯೊ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದ ‘ನಾಗಮಂಡಲ’ ನಟ
ಇಟ್ಟಿಗೆ ಗೂಡಿನ ಗುತ್ತಿಗೆದಾರ ರಾಮರೂಪ್ ನಿಶಾದ್ (48), ಆತನ ಮಗ ರಾಜು (18) ಹಾಗೂ ಮತ್ತೊಬ್ಬ ಯುವಕ ಸಂಜಯ್ (19) ಎಂಬುವರ ಮೇಲೆ ಇಬ್ಬರೂ ಬಾಲಕಿಯರ ಪೋಷಕರು ದೂರು ದಾಖಲಿಸಿದ್ದರು. ಬಾಲಕಿಯರ ಮೇಲೆ ಮೂವರೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ದೂರು ನೀಡಿದ್ದರು. ಇದಾದ ಬಳಿಕ ಪೊಲೀಸರು ಮೂವರನ್ನೂ ಬಂಧಿಸಿದ್ದರು. ಆದರೆ, ಆರೋಪಿಗಳ ಕುಟುಂಬಸ್ಥರು ಒಬ್ಬ ಬಾಲಕಿಯ ತಂದೆಗೆ ಪ್ರಕರಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದು, ಇದರಿಂದ ನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ