ನವ ದೆಹಲಿ: ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕಿ, ಮಾಜಿ ವಕ್ತಾರೆ ನೂಪುರ್ ಶರ್ಮ ಅವರ ಮೇಲೆ ದೇಶದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈಗ ಆ ಠಾಣೆಗಳಿಂದ ಅವರಿಗೆ ಸಮನ್ಸ್ ಜಾರಿಯಾಗುತ್ತಿದ್ದು, ವೈಯಕ್ತಿಕವಾಗಿ ಹಾಜರಾಗುವಂತೆ ಸೂಚನೆ ಬರುತ್ತಿದೆ. ಇತ್ತೀಚೆಗೆ ಮುಂಬಯಿ ಪೊಲೀಸರು ಅವರಿಗೆ ನೋಟಿಸ್ ನೀಡುವುದಕ್ಕಾಗಿ ದಿಲ್ಲಿಗೆ ಹೋಗಿದ್ದರೂ ಅವರು ಸಿಕ್ಕಿರಲಿಲ್ಲ.
ಈ ನಡುವೆ, ಕೋಲ್ಕೊತಾದ ನಾರ್ಕೆಲ್‌ದಾಂಗ್ ಪೊಲೀಸ್ ಠಾಣೆಯಿಂದ ನೂಪುರ್ ಶರ್ಮ ಅವರಿಗೆ ಈ-ಮೇಲ್ ಮೂಲಕ ಸಮನ್ಸ್ ಬಂದಿದ್ದು ತಕ್ಷಣ ವೈಯಕ್ತಿಕವಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಅವರು ಜೂನ್ ೨೦(ಸೋಮವಾರ) ಹಾಜರಾಗಬೇಕಾಗಿತ್ತು.
ನೂಪುರ್ ಶರ್ಮ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, ನನಗೆ ಜೀವ ಬೆದರಿಕೆ ಇದ್ದು, ವೈಯಕ್ತಿಕವಾಗಿ ಹಾಜರಾಗುವುದು ಕಷ್ಟ ಎಂದು ತಿಳಿಸಿದ್ದಾರೆ. ಹೀಗಾಗಿ, ನಾಲ್ಕು ವಾರ ಬಿಟ್ಟು ಹಾಜರಾಗುತ್ತೇನೆ, ಅವಕಾಶ ಕೊಡಿ ಎಂದು ಕೇಳಿದ್ದಾರೆ.
ಮೇ ತಿಂಗಳ ಅಂತ್ಯದಲ್ಲಿ ಟಿವಿ ಡಿಬೇಟ್‌ನಲ್ಲಿ ಭಾಗಹಿಸಿದ್ದ ನೂಪುರ್ ಶರ್ಮ ಅವರು, ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿತ್ತು. ಇದರ ವಿರುದ್ಧ ಜಾಗತಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಾನಿಯನ್ನು ಸರಿಪಡಿಸುವ ಉದ್ದೇಶದಿಂದ ನೂಪುರ್ ಶರ್ಮ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ | ಎಲ್ಲೂ ಕಾಣಿಸುತ್ತಿಲ್ಲ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಮುಂಬೈ ಪೊಲೀಸರಿಂದ ಹುಡುಕಾಟ