Site icon Vistara News

Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Wayanad Landslide

ತಿರುವನಂತಪುರಂ: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತಪಟ್ಟವರ ಸಂಖ್ಯೆ ಈಗ 291ಕ್ಕೆ ಏರಿಕೆಯಾಗಿದ್ದು, ಇನ್ನೂ ಸುಮಾರು 200 ಜನ ನಾಪತ್ತೆಯಾಗಿದ್ದು, ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನದಿಗಳಲ್ಲಿ, ಬೆಟ್ಟ ಕುಸಿತದ ಅವಶೇಷಗಳ ಅಡಿಯಲ್ಲಿ ಶವಗಳು ಸಿಗುತ್ತಿವೆ. ಇದರ ಮಧ್ಯೆಯೇ, ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ವಯನಾಡಿಗೆ ಭೇಟಿ ನೀಡಿದ್ದು, ಸಂತ್ರಸ್ತ ಕುಟುಂಬಗಳ ಜತೆ ಅವರು ಮಾತುಕತೆ ನಡೆಸಿದ್ದಾರೆ.

ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.

ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ

ವಯನಾಡು ಜಿಲ್ಲೆಯ ಹಲವೆಡೆ ಸಂಚರಿಸಿದ ಬಳಿಕ ರಾಹುಲ್‌ ಗಾಂಧಿ ಅವರು ಮಾಧ್ಯಮಗಳ ಜತೆ ಮಾತನಾಡಿದರು. “ವಯನಾಡು ಜನರ ಸ್ಥಿತಿಯನ್ನು ನೋಡಿದಾಗ ನನ್ನ ತಂದೆ ಸಾವಿನ ದಿನ, ಆ ದುಃಖವೇ ಆಯಿತು. ಜನರು ತಂದೆ, ತಾಯಿ ಜತೆಗೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಇಡೀ ದೇಶದ ಗಮನವೇ ಈಗ ವಯನಾಡು ಮೇಲಿದೆ. ನಾವೆಲ್ಲರೂ ವಯನಾಡು ಪರವಾಗಿ ನಿಲ್ಲೋಣ. ಇದು ಕೇವಲ ವಯನಾಡಿನ ದುರಂತ ಅಲ್ಲ, ರಾಜ್ಯ ಹಾಗೂ ದೇಶದ ದುರಂತವಾಗಿದೆ” ಎಂದು ಭಾವುಕರಾಗಿ ಹೇಳಿದರು.

“ನಾವು ಇಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಲು, ಜನರ ಪರವಾಗಿ ನಿಲ್ಲಲು ಬಂದಿದ್ದೇವೆ. ಕುಟುಂಬಸ್ಥರು ಹಾಗೂ ಮನೆಗಳನ್ನು ಕಳೆದುಕೊಂಡವರ ದುಃಖವನ್ನು ನೋಡಲು ಬೇಸರವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಏನು ಹೇಳಬೇಕು, ಯಾವ ರೀತಿ ಸಾಂತ್ವನ ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರಗಳು ಈಗ ಜನರ ಪರವಾಗಿ ನಿಲ್ಲಬೇಕು. ಅವರ ರಕ್ಷಣೆ, ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಜನರು ಅನುಭವಿಸುತ್ತಿರುವ ಕಷ್ಟವನ್ನು ಕಲ್ಪನೆ ಕೂಡ ಮಾಡಿಕೊಳ್ಳಲು ಆಗುತ್ತಿಲ್ಲ” ಎಂದರು.

ಪ್ರಿಯಾಂಕಾ ವಾದ್ರಾ ಅವರು ಪರಿಹಾರ ಕೇಂದ್ರಗಳಿಗೂ ತೆರಳಿ, ಸಂತ್ರಸ್ತರ ಜತೆ ಮಾತನಾಡಿದರು. ಇದಾದ ಬಳಿಕ ಮಾತನಾಡಿದ ಅವರು, “ನಾವು ಜನರಿಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೆರವಾಗಲು ಬಂದಿದ್ದೇವೆ. ಪರಿಸ್ಥಿತಿ ತುಂಬ ಭೀಕರವಾಗಿದೆ” ಎಂದು ಹೇಳಿದರು. ಭಾರಿ ಮಳೆಯ ಬಳಿಕ ವಯನಾಡಿನ ಸುಮಾರು 80 ಸಾವಿರ ಚದರ ಮೀಟರ್‌ ಭೂಮಿಯು ಕುಸಿದಿದ್ದು, ಸುಮಾರು 8 ಕಿಲೋಮೀಟರ್‌ವರೆಗೆ ಅವಶೇಷವು ಹರಿದುಕೊಂಡು ಹೋಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Wayanad Landslide: ವಯನಾಡು ಈಗ ಸಾವಿನ ಮನೆ: ಮೃತರ ಸಂಖ್ಯೆ 240, 160 ಶವ ಪತ್ತೆ, 220 ಜನ ಮಿಸ್ಸಿಂಗ್; ಭೀಕರ ಚಿತ್ರಣ ಇಲ್ಲಿದೆ

Exit mobile version