ತಿರುವನಂತಪುರಂ: ಹೆಣ್ಣುಮಕ್ಕಳಿಗೆ ಮಾಸಿಕವಾಗಿ ಹಾಗೂ ಮಾನಸಿಕವಾಗಿ ಋತುಚಕ್ರವು ಬಾಧಿಸುತ್ತದೆ. ಇದರಿಂದ ಅವರು ಕೆಲವೊಮ್ಮೆ ಉದ್ಯೋಗ, ವಿದ್ಯಾಭ್ಯಾಸ ಸೇರಿ ಯಾವುದೇ ಕೆಲಸ ಮಾಡಲು ನಿರಾಸಕ್ತಿ ಹೊಂದುತ್ತಾರೆ. ಒಂದೆರಡು ದಿನ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಇಂತಹ ಸೂಕ್ಷ್ಮವನ್ನು ಗಮನಿಸಿದ ಕೇರಳದ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ (Menstrual Leave For Students) ನೀಡುವ ಮೂಲಕ ಮೆಚ್ಚುಗೆ ಗಳಿಸಿದೆ.
ಹೌದು, ಕೊಚ್ಚಿ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (CUSAT)ಯು ವಿವಿ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ನೀಡಿದೆ. ಹೆಣ್ಣುಮಕ್ಕಳಿಗೆ ಹೆಚ್ಚುವರಿಯಾಗಿ ಶೇ.2ರಷ್ಟು ರಜೆ ನೀಡಲಾಗಿದ್ದು, ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಪ್ರತಿ ಸೆಮಿಸ್ಟರ್‌ಗೆ ಶೇ.2ರಷ್ಟು ರಜೆಯು ಅನ್ವಯವಾಗಲಿದೆ. ಹಾಗೆಯೇ, ಕೇರಳದಲ್ಲಿ ಇಂತಹ ಸೌಲಭ್ಯ ನೀಡಿದ ಮೊದಲ ವಿವಿ ಎಂಬ ಖ್ಯಾತಿಗೂ ವಿವಿ ಭಾಜನವಾಗಿದೆ ಎಂದು ತಿಳಿದುಬಂದಿದೆ.
“ವಿದ್ಯಾರ್ಥಿನಿಯರ ಮನವಿ ಮೇರೆಗೆ ಪ್ರತಿ ಸೆಮಿಸ್ಟರ್‌ನಲ್ಲಿ ಶೇ.2ರಷ್ಟು ಋತುಚಕ್ರ ರಜೆ ನೀಡಲು ನೀಡಲು ವಿಶ್ವವಿದ್ಯಾಲಯದ ಕುಲಪತಿ ತೀರ್ಮಾನಿಸಿದ್ದಾರೆ” ಎಂದು ವಿವಿ ಆಡಳಿತ ಮಂಡಳಿ ತಿಳಿಸಿದ್ದಾರೆ. ಸದ್ಯ, ವಿವಿಯಲ್ಲಿ ಪ್ರತಿ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಆದರೆ, ಇದು ಹೆಣ್ಣುಮಕ್ಕಳಿಗೆ ಶೇ.73ರಷ್ಟು ಕಡ್ಡಾಯ ಹಾಜರಾತಿ ಆಗಲಿದೆ. ಕೊಚ್ಚಿ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ 4 ಸಾವಿರ ವಿದ್ಯಾರ್ಥಿನಿಯರಿದ್ದಾರೆ.
ಇದನ್ನೂ ಓದಿ | ವಿದ್ಯಾರ್ಥಿನಿಯರಿಗೆ 2 ತಿಂಗಳು ಮಾತೃತ್ವ ರಜೆ, ಗರ್ಭಪಾತವಾದರೆ 14 ದಿನ ರಜೆ ; ಕೇರಳದಲ್ಲಿ ಪ್ರಥಮ ಪ್ರಯೋಗ!