Site icon Vistara News

FIFA World Cup | ಎಂಬಾಪೆಯನ್ನು ಫ್ರಾನ್ಸ್ ಅಧ್ಯಕ್ಷ ಸಂತೈಸಿದ ಕ್ಷಣವನ್ನು ಮೋದಿಗೆ ಹೋಲಿಸಿದ ಬಿಜೆಪಿ ನಾಯಕ ಸಿ.ಟಿ ರವಿ!

C T Ravi @ FIFA World Cup

ಬೆಂಗಳೂರು: ಭಾನುವಾರ ನಡೆದ ಕತಾರ್ ಫುಟ್ಬಾಲ್ ವಿಶ್ವಕಪ್‌ನ ಫೈನಲ್ (FIFA World Cup) ಪಂದ್ಯಾವಳಿಯಲ್ಲಿ ಫ್ರಾನ್ಸ್ ವಿರುದ್ಧ ಅರ್ಜಿಂಟೀನಾ ತಂಡವು ಗೆಲುವು ಸಾಧಿಸಿ, ಟ್ರೋಫಿಯನ್ನು ಗೆದ್ದುಕೊಂಡಿತು. ಆಗ ಮೈದಾನಕ್ಕೆ ತೆರಳಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು, ದುಃಖದಲ್ಲಿದ್ದ ಫ್ರಾನ್ಸ್ ತಂಡದ ಪ್ರತಿಭಾವಂತ ಆಟಗಾರ ಕೈಲಿಯಾನ್‌ ಎಂಬಾಪೆ ಅವರನ್ನು ಸಮಾಧಾನಗೊಳಿಸಿದರು. ಘಟನೆಯನ್ನು ಬಿಜೆಪಿ ನಾಯಕ ಸಿ.ಟಿ ರವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ಸಮಾಧಾನಗೊಳಿಸಿದ ಘಟನೆಗೆ ಹೋಲಿಸಿ, ಎರಡೂ ಘಟನೆಗಳ ಫೋಟೊಗಳೊಂದಿಗೆ ಟ್ವೀಟ್ ಮಾಡಿದ್ದಾರೆ.

2019ರಲ್ಲಿ ಇಸ್ರೋ ಚಂದ್ರಯಾನ-2 ಕೈಗೊಂಡಿತ್ತು. ಆಗ, ವಿಕ್ರಮ್ ಮೂನ್ ಲ್ಯಾಂಡರ್ ಈ ಮೊದಲೇ ನಿಗದಿ ಮಾಡಿದ ರೀತಿಯಲ್ಲಿ ಲ್ಯಾಂಡ್ ಮಾಡಲಿಲ್ಲ. ಅಲ್ಲದೇ ಸಂಪರ್ಕವನ್ನೂ ಕಡಿದುಕೊಂಡಿತು. ಮಿಷನ್ ವಿಫಲವಾದ್ದರಿಂದ ಕಣ್ಣೀರು ಹಾಕುತ್ತಿದ್ದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ಅಪ್ಪಿಕೊಂಡ ಮೋದಿ ಅವರು ಸಂತೈಸಿದ್ದರು. ಸಿ.ಟಿ. ರವಿ ಅಂದು ಮೋದಿ ಅವರು ಶಿವನ್ ಅವರನ್ನು ಸಂತೈಸಿದ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರು ಎಂಬಾಪೆ ಅವರನ್ನು ಸಂತೈಸತ್ತಿರುವ ಎರಡೂ ಫೋಟೋಗಳನ್ನು ಟ್ವೀಟ್ ಮಾಡಿ, ದೊಡ್ಡ ನಾಯಕರು ಎಂದಿಗೂ ತಮ್ಮ ಜನರ ಬೆಂಬಲಕ್ಕೆ ಗಟ್ಟಿಯಾಗಿ ನಿಲುತ್ತಾರೆ ಎಂದು ಬರೆದುಕೊಂಡಿದ್ದಾರೆ. ಸಿ.ಟಿ.ರವಿ ಅವರ ಈ ಟ್ವೀಟ್ ವೈರಲ್ ಆಗಿದೆ.

ಮೆಸ್ಸಿ ಅವರು ವಿಶ್ವ ಕಪ್ ಗೆದ್ದರು. ಆದರೆ, ಮ್ಯಾಕ್ರನ್ ಅವರು ಹೃದಯಗಳನ್ನು ಗೆದ್ದರು. ಅಂದು ಚಂದ್ರಯಾನ-2 ವಿಫಲವಾದಾಗ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ನರೇಂದ್ರ ಮೋದಿ ಅವರು ಸಂತೈಸಿದ ಕ್ಷಣಗಳು ಎಂದಿಗೂ ನಮ್ಮ ಮನದಲ್ಲಿರಲಿವೆ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ವೈರಲ್ ಆಗಿದೆ. ಮೆಚ್ಚುಗೆ ವ್ಯಕ್ತಪಡಿಸಿದಷ್ಟೇ ಜನರು ಸಿ.ಟಿ. ರವಿ ಅವರು ಎಲ್ಲವನ್ನೂ ಮೋದಿ ಜತೆಗೆ ಹೋಲಿಸುವುದನ್ನು ನಿಲ್ಲಿಸಿ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ | Fifa World Cup 2022 | ಕತಾರ್​ ಫಿಫಾ ವಿಶ್ವ ಕಪ್​ನ ಗೋಲ್ಡನ್ ಬೂಟ್ ರೇಸ್​ನಲ್ಲಿರುವ 5 ಆಟಗಾರರು

Exit mobile version