Site icon Vistara News

Operation Ajay: ನೇಪಾಳಿ ಪ್ರಜೆಗಳೂ ಸೇರಿ 286 ಭಾರತೀಯರನ್ನು ಹೊತ್ತ 5ನೇ ವಿಮಾನ ಬಂತು ಭಾರತಕ್ಕೆ

Fifth flight of operation ajay landed in India with 286 passengers

ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ನಲ್ಲಿ (Israel Palestine War) ಸಿಲುಕಿರುವ ಭಾರತೀಯರನ್ನು (Indian Citizens) ಆಪರೇಷನ್ ಅಜಯ್ (Operation Ajay) ಹೆಸರಿನಲ್ಲಿ ಭಾರತ ಸರ್ಕಾರವು ವಾಪಸ್ ತಾಯ್ನಾಡಿಗೆ ಕರೆ ತರುತ್ತಿದೆ. 18 ನೇಪಾಳಿ ಪ್ರಜೆಗಳು (Nepal Citizens) ಸೇರಿದಂತೆ 286 ಭಾರತೀಯರನ್ನು ಹೊತ್ತ ಐದನೇ ವಿಮಾನವು (Fifth Flight) ಮಂಗಳವಾರ ಭಾರತಕ್ಕೆ ಬಂದಿಳಿಯಿತು ಎಂದು ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ (external affairs minister S Jaishankar) ಅವರು ತಿಳಿಸಿದ್ದಾರೆ. ”ನಾವು 254 ನೇಪಾಳಿ ನಾಗರಿಕರನ್ನು ನೇಪಾಳ್ ಏರ್‌ಲೈನ್ಸ್ ಮೂಲಕ ಅಕ್ಟೋಬರ್ 12ರಂದು ವಾಪಸ್ ತಾಯ್ನಾಡಿಗೆ ಕಳುಹಿಸಿದ್ದೇವೆ. ಇನ್ನೂ ಸಿಲುಕಿರುವ ನೇಪಾಳಿಗರನ್ನು ಕಳುಹಿಸಲು ವಿಮಾನಗಳ ಅವಶ್ಯಕತೆ ಇದೆ,” ಎಂದು ಇಸ್ರೇಲ್‌ನಲ್ಲಿರುವ ನೇಪಾಳ ರಾಯಭಾರಿ ಕಾಂತಾ ರಿಝಾಲ್ ಅವರು ತಿಳಿಸಿದ್ದಾರೆ.

ಯುದ್ಧಪೀಡಿತ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆ ತರುವ ಸಂಬಂಧ ಭಾರತ ಸರ್ಕಾರವು ಅಕ್ಟೋಬರ್ 11ರಿಂದಲೇ ಆಪರೇಷನ್ ಅಜಯ್ ಆರಂಭಿಸಿದೆ. ಮಂಗಳವಾರ ಐದನೇ ವಿಮಾನವು 200ಕ್ಕೂ ಹೆಚ್ಚು ಜನರನ್ನು ತಾಯ್ನಾಡಿಗೆ ಕರೆ ತಂದಿದೆ. ಈ ಮಧ್ಯೆ, ನೇಪಾಳಿ ಪ್ರಜೆಗಳನ್ನು ಸುರಕ್ಷಿತವಾಗಿ ಕರೆ ತರಲಾಗಿದೆ. ಮುಂದೆ ಎದುರಾಗುವ ಪರಿಸ್ಥಿತಿಗಳನ್ನು ಗಮನಿಸಿಕೊಂಡು, ಅಗತ್ಯ ಎನಿಸಿದರೆ ಇನ್ನಷ್ಟು ವಿಮಾನಗಳ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ರಾಜ್ಯ ಸಚಿವ ವಿ ಮುರಳೀಧರನ್ ಅವರು ಹೇಳಿದ್ದಾರೆ.

ಈ 5 ವಿಮಾನಗಳು ಬಂದಿವೆ ಮತ್ತು ಅಗತ್ಯವಿದ್ದಲ್ಲಿ, ಪರಿಸ್ಥಿತಿಯ ಆಧಾರದ ಮೇಲೆ ಹೆಚ್ಚಿನ ವಿಮಾನಗಳನ್ನು ಕಳುಹಿಸುತ್ತೇವೆ. ಕಳೆದ ಸುಮಾರು 4-5 ದಿನಗಳಲ್ಲಿ ನಾವು ಇಸ್ರೇಲ್‌ನಿಂದ ಭಾರತಕ್ಕೆ ವಿಮಾನ ಹಾರಾಟ ನಡೆಸಿದ್ದೇವೆ ಎಂದು ಸಚಿವ ವಿ ಮುರಳೀಧರನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇಸ್ರೇಲ್‌ನಲ್ಲಿ ಸಂಘರ್ಷ ಸ್ಥಿತಿ ಉಲ್ಬಣಗೊಂಡಿದೆ. ಈಗಾಗಲೇ ಭಾರತೀಯ ದೂತವಾಸ ಕಚೇರಿ ಮಾರ್ಗದರ್ಶಿ ಸೂಚನೆಗಳನ್ನು ಭಾರತೀಯ ಪ್ರಜೆಗಳಿಗೆ ನೀಡಿದೆ. ಅಲ್ಲದೇ, ಭಾರತೀಯ ದೂತವಾಸ ಕಚೇರಿಯಲ್ಲಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ ಎಂದು ಸಚಿವ ವಿ ಮುರಳೀಧರನ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Ajay: ಇಸ್ರೇಲ್‌ನಿಂದ ಭಾರತೀಯರ ರಕ್ಷಣೆಗೆ ಆಪರೇಷನ್‌ ಅಜಯ್; ಏನಿದು? ಪ್ಲಾನ್‌ ಹೇಗಿದೆ?

ಭಾರತೀಯ ರಾಯಭಾರ ಕಚೇರಿಯು ಜನರ ವಿನಂತಿಗಳು ಮತ್ತು ಅವರ ಅಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಎಲ್ಲರೂ ಭಾರತಕ್ಕೆ ಪ್ರಯಾಣಿಸಬೇಕೆಂದು ಬಯಸುತ್ತಿದೆ. ಕಳೆದ ವಾರ ಒಟ್ಟು ನಾಲ್ಕು ವಿಮಾನಗಳು ಟೆಲ್‌ ಅವಿವ್‌ದಿಂದ ಮಕ್ಕಳು ಸೇರಿದಂತೆ 906 ಜನರನ್ನು ವಾಪಸ್ ತಾಯ್ನಾಡಿಗೆ ಕರೆ ತಂದಿವೆ ಎಂದು ಸಚಿವರು ತಿಳಿಸಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದರು. ಬಳಿಕ ಇಸ್ರೇಲ್ ಕೂಡ ಪ್ರತೀಕಾರವಾಗಿ ಗಾಜಾ ಪಟ್ಟಿಯ ಮೇಲೆ ಯುದ್ಧವನ್ನೇ ಸಾರಿದೆ. ಈವರೆಗೆ ಗಾಜಾಪಟ್ಟಿಯಲ್ಲಿ 3000 ಜನರು ಮೃತಪಟ್ಟಿದ್ದು, 10000 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದೇ ವೇಳೆ, ಹಮಾಸ್ ದಾಳಿಗೆ ಇಸ್ರೇಲ್‌ನಲ್ಲಿ 1400 ಜನರು ಮೃತಪಟ್ಟಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version