Site icon Vistara News

Monsoon 2023: ‘ಲೇಟ್ ಲತೀಫ್’ ಮಳೆರಾಯ! ಒಂದು ವಾರ ತಡವಾಗಿ ಕೇರಳಕ್ಕೆ ಬಂದ

rainy season

ನವದೆಹಲಿ: ವಾಡಿಕೆಗಿಂತ ಒಂದು ವಾರ ತಡವಾಗಿ ಮುಂಗಾರು (Monsoon 2023) ಕೇರಳಕ್ಕೆ (Kerala) ಕಾಲಿಟ್ಟಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ಕ್ಕೆ ಮುಂಗಾರು ಮಾರುತಗಳು ಕೇರಳದ ಕರಾವಳಿಗೆ ಅಪ್ಪಳಿಸುತ್ತಿದ್ದವು. ಆದರೆ, ಈ ಬಾರಿ ಒಂದು ವಾರ ತಡವಾಗಿದೆ. ಇದರಿಂದ ಸಹಜವಾಗಿಯೇ ಪರಿಣಾಮ ಬೀರಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ಹವಾಮಾನ ಸಂಸ್ಥೆ (India Meteorological Department – IMD), ನೈಋತ್ಯ ಮಾನ್ಸೂನ್ ಜೂನ್ 1ರ ಬದಲಿಗೆ ಇಂದು ಅಂದರೆ ಜೂನ್ 8ರಂದು ಕೇರಳದಲ್ಲಿ ಆರಂಭವಾಗಿದೆ ಎಂದಿದೆ.

ಕೇರಳ ಬಳಿಕ ನೈಋತ್ಯ ಮಾನ್ಸೂನ್ ದಕ್ಷಿಣ ಅರಬ್ಬಿ ಸಮುದ್ರದ ಉಳಿದ ಭಾಗಗಳಿಗೆ ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳಿಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಸಂಪೂರ್ಣ ಲಕ್ಷದ್ವೀಪ ಪ್ರದೇಶ, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು, ಕೊಮೊರಿನ್ ಪ್ರದೇಶದ ಉಳಿದ ಭಾಗಗಳು, ಮನ್ನಾರ್ ಕೊಲ್ಲಿ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ವಿಸ್ತರಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕ ಮಳೆಯಾಗಿದೆ. ಈ ಪರಿಸ್ಥಿತಿಗಳನ್ನು ಪರಿಗಣಿಸಿ, ನೈಋತ್ಯ ಮಾನ್ಸೂನ್ ಕೇರಳಕ್ಕೆ ಕಾಲಿಟ್ಟಿದೆ ಎಂದು ಹೇಳಬಹುದು ಭಾರತೀಯ ಹವಾಮಾನ ಸಂಸ್ಥೆ ಹೇಳಿದೆ. ಕರ್ನಾಟಕವೂ ಸೇರದಂತೆ ಅನೇಕ ರಾಜ್ಯಗಳು ಮುಂಗಾರು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಕರ್ನಾಟಕದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಲ್ಲದೇ, ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯ ಪರಿಶೀಲನೆ ಮಾಡಿದ್ದಾರೆ.

ಆದರೆ, ಖಾಸಗಿ ಹಮಾಮಾನ ಮುನ್ಸೂಚಕ ಸ್ಕೈಮೆಟ್ ಪ್ರಕಾರ, ಜೂನ್ 9ರಂದು ಮುಂಗಾರು ಕೇರಳದಲ್ಲಿ ಆರಂಭವಾಗಲಿದೆ ಎಂದು ಹೇಳಿದೆ. ಕೇರಳದಲ್ಲಿ ಆರಂಭವಾಗು ಮಳೆ ತೀರಾ ಭರ್ಜರಿಯಾಗಿರುವುದಿಲ್ಲ. ಆದರೆ, ಜೂನ್ 12ರ ತನಕ ಮಂದಗತಿಯಲ್ಲಿದ್ದು, ಬಳಿಕ ಬಿರುಸಾಗಲಿದೆ ಎಂದು ಸ್ಕೈಮೆಟ್ ಉಪಾಧ್ಯಕ್ಷ ಮಹೇಶ್ ಪಲಾವತ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Monsoon Forecast 2023 : ಹವಾಮಾನ ಇಲಾಖೆ VS ಸ್ಕೈಮೆಟ್; ಹೇಗಿರಲಿದೆ ಈ ಬಾರಿಯ ಮುಂಗಾರು ಮಳೆ?

Exit mobile version