Site icon Vistara News

ರೇಷನ್​ ಅಂಗಡಿಯಲ್ಲಿ ಪ್ರಧಾನಿ ಮೋದಿ ಫೋಟೋ ಯಾಕಿಲ್ಲ? ಜಿಲ್ಲಾಧಿಕಾರಿಗೆ ಬೈದು, ಟ್ರೋಲ್​ ಆದ ನಿರ್ಮಲಾ ಸೀತಾರಾಮನ್​​

ತೆಲಂಗಾಣ: ಮೂರು ದಿನಗಳ ತೆಲಂಗಾಣ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅಲ್ಲಿನ ಕಾಮಾರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿ ಬಳಿ ಆಡಿದ ಮಾತುಗಳ ವಿಡಿಯೋ ವೈರಲ್ ಆಗಿದ್ದು, ಅದು ಪ್ರತಿಪಕ್ಷಗಳ ನಾಯಕರಿಂದ ಟೀಕೆಗೆ ಗುರಿಯಾಗಿದೆ. ಕೇಂದ್ರ ಸಚಿವೆಯದ್ದು ಇದ್ಯಾವ ಪರಿಯ ಅಶಿಸ್ತಿನ ವರ್ತನೆ ಎಂದು ಅಲ್ಲಿನ ಸಚಿವ ಕೆ.ಟಿ.ರಾಮರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಮಾರೆಡ್ಡಿ ಜಿಲ್ಲೆ ಮತ್ತು ಬಾನ್ಸವಾಡ ಕ್ಷೇತ್ರಗಳಿಗೆ ಭೇಟಿ ಕೊಟ್ಟ ನಿರ್ಮಲಾ ಸೀತಾರಾಮನ್​, ಬಿಕ್ನೂರ್​​ನಲ್ಲಿರುವ ಒಂದು ನ್ಯಾಯಬೆಲೆ (ಪಡಿತರ ನೀಡುವ ಅಂಗಡಿ) ಅಂಗಡಿಗೆ ಹೋಗಿದ್ದರು. ಅಲ್ಲಿ ಒಂದಷ್ಟು ಫಲಾನುಭವಿಗಳ ಜತೆ ಮಾತುಕತೆ ನಡೆಸಿ, ಕುಂದುಕೊರತೆಯನ್ನೂ ಆಲಿಸಿದರು. ಹೀಗೆ ಮಾತನಾಡುವಾಗ ಅಲ್ಲಿಯೇ ಇದ್ದ ಜಿಲ್ಲಾಧಿಕಾರಿ ಜಿತೇಶ್​ ಪಾಟೀಲ್​ ಬಳಿ ‘ರೇಷನ್​ ಅಂಗಡಿಗಳಲ್ಲಿ ಫಲಾನುಭವಿಗಳಿಗೆ 1 ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡಲಾಗುತ್ತಿದೆ. ತೆರೆದ ಮಾರುಕಟ್ಟೆಯಲ್ಲಿ ಒಂದು ಕೆಜಿ ಅಕ್ಕಿಯ ಬೆಲೆ 35 ರೂಪಾಯಿ. ಆ 35 ರೂಪಾಯಿ ಅಕ್ಕಿಯನ್ನು 1 ರೂಪಾಯಿಗೆ ಕೊಡುವಾಗ ಕೇಂದ್ರ ಸರ್ಕಾರ 29 ರೂಪಾಯಿ ಭರಿಸುತ್ತಿದ್ದರೆ, ರಾಜ್ಯ ಸರ್ಕಾರ 5 ರೂಪಾಯಿ ಪಾಲು ನೀಡುತ್ತಿದೆ. 1 ರೂ. ಮಾತ್ರ ಸಾರ್ವಜನಿಕರಿಂದ ತೆಗೆದುಕೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಷ್ಟು ದೊಡ್ಡ ಅನುಕೂಲ ಮಾಡಿಕೊಟ್ಟ ಮೇಲೆ, ಈ ಅಂಗಡಿಯಲ್ಲಿ ಮೋದಿಯವರ ಬ್ಯಾನರ್​, ಫ್ಲೆಕ್ಸ್​ ಹಾಕಲು ಏನು ಸಮಸ್ಯೆ? ಇಲ್ಲಿ ಮೋದಿಯವರ ಫೋಟೋ ತಂದು ಹಾಕಿ’ ಎಂದು ಹೇಳಿದ್ದಾರೆ.

‘ನರೇಂದ್ರ ಮೋದಿಯವರು ದೇಶದ ನಾಗರಿಕರಿಗೋಸ್ಕರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ನಾಳೆ ನಮ್ಮ ಬಿಜೆಪಿ ಕಾರ್ಯಕರ್ತರು ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫ್ಲೆಕ್ಸ್​ ತಂದು ಹಾಕುತ್ತಾರೆ. ಅದನ್ನು ಯಾರೂ ತೆಗೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು. ದೇಶದ ಜನರು ಹೊಟ್ಟೆ ತುಂಬ ಊಟ ಮಾಡಲಿ ಎಂದು ಉಚಿತ ಪಡಿತರ ನೀಡುತ್ತಿರುವ ಮೋದಿಯವರು ಮಹಾನ್ ನಾಯಕ. ನಾನಿಷ್ಟು ಹೇಳಿದರೂ ಇಲ್ಲಿ ಮೋದಿ ಫ್ಲೆಕ್ಸ್​ ಇಡದೆ ಹೋದರೆ, ನಾನು ಮತ್ತೆ ಇಲ್ಲಿಗೇ ಬಂದು ನೆನಪಿಸುತ್ತೇನೆ’ ಎಂದು ಡಿಸಿ ಜಿತೇಶ್​ ಪಾಟೀಲ್​ಗೆ ಹೇಳಿದ್ದಾರೆ.

ಎಕ್ಸ್​ಕ್ಯೂಸ್ ಮಿ !
ಹೀಗೆ 1 ರೂಪಾಯಿ ಅಕ್ಕಿ ನೀಡುವಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪಾಲುಗಳೆಷ್ಟು ಎಂಬುದರ ಬಗ್ಗೆ ಮಾತನಾಡುವಾಗ ನಿರ್ಮಲಾ ಸೀತಾರಾಮನ್​ ‘ನೀವೇ ಹೇಳಿ ನೋಡೋಣ..35 ರೂಪಾಯಿ ಅಕ್ಕಿಯಲ್ಲಿ ಕೇಂದ್ರ ಸರ್ಕಾರ ಎಷ್ಟು ವೆಚ್ಚ ಭರಿಸುತ್ತದೆ, ರಾಜ್ಯವೆಷ್ಟು ಕೊಡುತ್ತದೆ?’ ಎಂದು ಜಿಲ್ಲಾಧಿಕಾರಿ ಬಳಿ ಕೇಳಿದರು. ಆಗ ಜಿಲ್ಲಾಧಿಕಾರಿ ಉತ್ತರ ಹೇಳಲು ತಡಬಡಾಯಿಸಿದ್ದಲ್ಲದೆ, ಸ್ವಲ್ಪ ಹೊತ್ತು ಬಿಟ್ಟು, ‘ತೆಲಂಗಾಣ ರಾಜ್ಯ ಸರ್ಕಾರ 34 ರೂ. ಭರಿಸುತ್ತದೆ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್​ ‘ಎಕ್ಸ್​ಕ್ಯೂಸ್​ ಮಿ, ನೀವೊಬ್ಬ ಐಎಎಸ್​ ಅಧಿಕಾರಿ. ಇದೊಂದು ಸಣ್ಣ ವಿಷಯ ಗೊತ್ತಿಲ್ಲ ಎನ್ನುತ್ತೀರಿ. ನಾನು ಸುದ್ದಿಗೋಷ್ಠಿ ನಡೆಸುವುದಕ್ಕೂ ಮೊದಲು ಸರಿಯಾಗಿ ಲೆಕ್ಕಾಚಾರ ಮಾಡಿ ಹೇಳಿ’ ಎಂದು ಹೇಳಿದರು. ಬಳಿಕ ಕೇಂದ್ರ ಮತ್ತು ರಾಜ್ಯದ ಪಾಲುಗಳ ಮೊತ್ತವನ್ನು ತಾವೇ ವಿವರಿಸಿದರು.

ಕೆಟಿಆರ್​ ಕಿಡಿ
ತೆಲಂಗಾಣ ಸಚಿವ, ಸಿಎಂ ಕೆಸಿಆರ್ ಪುತ್ರ ಕೆ.ಟಿ.ರಾಮರಾವ್​ ಟ್ವೀಟ್ ಮಾಡಿ, ’ಹಣಕಾಸು ಸಚಿವೆಯ ನಡವಳಿಕೆಯಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ತುಂಬ ಉತ್ಸಾಹದಿಂದ, ನಿಷ್ಠೆಯಿಂದ ಕೆಲಸ ಮಾಡುವ ಐಎಎಸ್​ ಅಧಿಕಾರಿಗಳಿಗೆ ಈ ರಾಜಕಾರಣಿಗಳು ಬೀದಿಯಲ್ಲಿ ನಿಂತು ಅವಮಾನಿಸುತ್ತಿದ್ದಾರೆ. ಅವರನ್ನು ನಿರುತ್ಸಾಹಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಹಾಗೇ, ನಿರ್ಮಲಾ ಸೀತಾರಾಮನ್ ಮಾತನಾಡಿದ ವಿಡಿಯೋ ಶೇರ್​ ಆದ ಬೆನ್ನಲ್ಲೇ ನೆಟ್ಟಿಗರೂ ಕೂಡ ಹಣಕಾಸು ಸಚಿವೆಯನ್ನು ಟೀಕಿಸುತ್ತ, ಟ್ರೋಲ್​ ಮಾಡುತ್ತಿದ್ದಾರೆ. ‘ಇವರೇನು ನಮ್ಮ ದೇಶದ ಆರ್ಥಿಕ ಸಚಿವೆಯೋ, ಪ್ರಧಾನಿ ಮೋದಿ ಜೀ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯೋ’ ಎಂದೂ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Viral Video: ಹಾರ್ಸ್‌ ಟ್ರೇಡಿಂಗ್‌ಗೂ ಜಿಎಸ್‌ಟಿ ಎಂದ ನಿರ್ಮಲಾ ಸೀತಾರಾಮನ್‌; ಭರ್ಜರಿ ಟ್ರೋಲ್‌

Exit mobile version