ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಗುರುವಾರ (ಜುಲೈ 4) ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ (GPF) ಸೇರಿ ಹಲವು ಭವಿಷ್ಯ ನಿಧಿ ಯೋಜನೆಗಳಿಗೆ ಬಡ್ಡಿದರವನ್ನು ಘೋಷಣೆ ಮಾಡಿದೆ. ಸಾಮಾನ್ಯ ಭವಿಷ್ಯ ನಿಧಿ ಸೇರಿ ಹಲವು ಭವಿಷ್ಯ ನಿಧಿಗಳಿಗೆ ಕೇಂದ್ರ ಸರ್ಕಾರವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.7.1ರಷ್ಟು ಬಡ್ಡಿದರವನ್ನು (PF Interest) ಘೋಷಣೆ ಮಾಡಿದೆ.
ಕೇಂದ್ರ ಹಣಕಾಸು ಸಚಿವಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಪ್ರಸಕ್ತ ಹಣಕಾಸು ವರ್ಷದ ಜುಲೈ 1ರಿಂದ ಸೆಪ್ಟೆಂಬರ್ 30ರವರೆಗಿನ ತ್ರೈಮಾಸಿಕದಲ್ಲಿ ಜಿಪಿಎಫ್ ಸೇರಿ ಹಲವು ಭವಿಷ್ಯ ನಿಧಿಗಳ ಮೇಲಿನ ಬಡ್ಡಿದರವನ್ನು ಶೇ.7.1ರಷ್ಟು ಘೋಷಿಸಲಾಗಿದೆ. ಇದೊಂದು ಔಪಚಾರಿಕ ಮಾಹಿತಿಯಾಗಿದೆ. ನೂತನ ಬಡ್ಡಿದರವು ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ” ಎಂಬುದಾಗಿ ಮಾಹಿತಿ ನೀಡಿದೆ.
ಇದರ ಜತೆಗೆ, ಇದೇ ತ್ರೈಮಾಸಿಕದಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ.8.2ರಷ್ಟು ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯ ಬಡ್ಡಿದರವನ್ನು ಶೇ.7.7ರಷ್ಟೇ ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
GOOD NEWS FOR CENTRAL GOVT EMPLOYEES! Finance Ministry declares 7.1% interest rate for General Provident Fund (GPF) and other provident fund schemes for Q3 (July-Sept). A welcome move for government employees! #GPF #ProvidentFund #CentralGovtEmployees
— Study (@Study__Test) July 4, 2024
ಯಾವೆಲ್ಲ ಭವಿಷ್ಯ ನಿಧಿಗಳಿಗೆ ಶೇ.7.1ರಷ್ಟು ಬಡ್ಡಿದರ?
- ಸಾಮಾನ್ಯ ಭವಿಷ್ಯ ನಿಧಿ (ಕೇಂದ್ರ ಸೇವೆಗಳು)
- ಕೊಡುಗೆ ಭವಿಷ್ಯ ನಿಧಿ (ಭಾರತ)
- ಅಖಿಲ ಭಾರತ ಸೇವೆಗಳ ಭವಿಷ್ಯ ನಿಧಿ
- ರಾಜ್ಯ ರೈಲ್ವೆ ಭವಿಷ್ಯ ನಿಧಿ
- ಸಾಮಾನ್ಯ ಭವಿಷ್ಯ ನಿಧಿ (ರಕ್ಷಣಾ ಸೇವೆಗಳು)
- ಭಾರತೀಯ ಶಸ್ತ್ರಾಸ್ತ್ರ ಇಲಾಖೆ ಭವಿಷ್ಯ ನಿಧಿ
ಜಿಪಿಎಫ್‌ಗೂ, ಪಿಎಫ್‌ಗೂ ಏನು ವ್ಯತ್ಯಾಸ?
ಸಾಮಾನ್ಯ ಭವಿಷ್ಯ ನಿಧಿಗೂ (GPF), ಉದ್ಯೋಗಿಗಳ ಭವಿಷ್ಯ ನಿಧಿಗೂ (EPF) ಅಂತಹ ವ್ಯತ್ಯಾಸವೇನಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಕಂಪನಿಗಳು ನೀಡುವ ಭವಿಷ್ಯ ನಿಧಿಯನ್ನು ಇಪಿಎಫ್ ಎನ್ನುತ್ತಾರೆ. ಇನ್ನು ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಭವಿಷ್ಯ ನಿಧಿಯನ್ನು ಸಾಮಾನ್ಯ ಭವಿಷ್ಯ ನಿಧಿ ಎಂದು ಕರೆಯಲಾಗುತ್ತದೆ. ಎರಡೂ ಕಡೆಗಳಲ್ಲಿ ಉದ್ಯೋಗಿಯ ನೌಕರನ ಸಂಬಳದಲ್ಲಿ ಮಾಸಿಕವಾಗಿ ಒಂದಷ್ಟು ನಿಗದಿತ ಹಣವನ್ನು ಕಡಿತಗೊಳಿಸಲಾಗುತ್ತದೆ. ಈ ಮೊತ್ತಕ್ಕೆ ಬಡ್ಡಿಯನ್ನೂ ನೀಡಲಾಗುತ್ತದೆ.
ಇದನ್ನೂ ಓದಿ: Money Guide: ಪಿಎಫ್ ಅಕೌಂಟ್‌ಗೆ ಹೊಸ ಮೊಬೈಲ್ ನಂಬರ್ ಸೇರಿಸಬೇಕೆ? ಜಸ್ಟ್ ಹೀಗೆ ಮಾಡಿ ಸಾಕು