ಜೈಪುರ: ಗೋವುಗಳ ಹತ್ಯೆ ಮಾಡುವವರು ಹಾಗೂ ಅಕ್ರಮವಾಗಿ ಸಾಗಿಸುವವರನ್ನು ನಿರಾತಂಕವಾಗಿ ಹತ್ಯೆ ಮಾಡಿ ಎಂದು ಬೆಂಬಲಿಗರಿಗೆ ಅಭಯ ನೀಡುವ ಮೂಲಕ ಕೋಮುಗಲಭೆಗೆ ಪ್ರಚೋದನೆ ನೀಡಿದ (Communal Hatred) ಆರೋಪದಲ್ಲಿ ರಾಜಸ್ಥಾನದ ಬಿಜೆಪಿ ಹಿರಿಯ ನಾಯಕ ಜ್ಞಾನದೇವ್ ಅಹುಜಾ (Gyan Dev Ahuja) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜ್ಞಾನದೇವ್ ಅಹುಜಾ ಅವರು ಮಾತನಾಡಿರುವ ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ “ಗೋವುಗಳ ಹತ್ಯೆ ಹಾಗೂ ಸಾಗಣೆಯಲ್ಲಿ ತೊಡಗಿದ್ದ ಐವರನ್ನು ನಾವೇ ಹತ್ಯೆ ಮಾಡಿದ್ದೇವೆ. ಬೆಹ್ರೋರ್ ಇರಲಿ ಅಥವಾ ಲಾಲ್‌ವಂಡಿ ಇರಲಿ (ಗೋವುಗಳ ಕಳ್ಳ ಸಾಗಣೆ ಆರೋಪದಲ್ಲಿ ಹತ್ಯೆಗೀಡಾದ ಪೆಹ್ಲು ಖಾನ್ ಹಾಗೂ ರಕ್ಬರ್ ಖಾನ್ ಅವರನ್ನು ಉಲ್ಲೇಖಿಸುತ್ತ ಹೇಳಿದ್ದು), ಇದುವರೆಗೆ ಐವರನ್ನು ಹತ್ಯೆಗೈದಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮವರೊಬ್ಬರನ್ನು ಕೊಲೆ ಮಾಡಲಾಗಿದೆ” ಎಂದಿದ್ದಾರೆ.
ಗೋವುಗಳನ್ನು ಹತ್ಯೆ ಮಾಡುವವರು, ಸಾಗಿಸುವವರ ಹತ್ಯೆ ಮಾಡಲು ನನ್ನ ಬೆಂಬಲಿಗರಿಗೆ ಪೂರ್ಣಪ್ರಮಾಣದ ಸ್ವಾತಂತ್ರ್ಯ ನೀಡಿದ್ದೇನೆ. ಅವರು ಜೈಲಿಗೆ ಹೋದರೂ ಬಿಡಿಸಿಕೊಂಡು ಬರುತ್ತೇನೆ” ಎಂದು ಹೇಳಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡಿದೆ. ಹಾಗಾಗಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಿಸಿದ ಬಳಿಕ ಮಾತನಾಡಿದ ಅವರು, “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | ಮಣಿಪುರದಲ್ಲಿ ಕೋಮು ಸಂಘರ್ಷದ ಕಿಚ್ಚು; 5 ದಿನ ರಾಜ್ಯಾದ್ಯಂತ ಇಂಟರ್ನೆಟ್ ಕಟ್