Site icon Vistara News

Mahua Moitra: ಹೊಸ ಕಾನೂನಿನಂತೆ ಟಿಎಂಸಿ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್;‌ ಕಾರಣ ಇಲ್ಲಿದೆ

Mahua Moitra

FIR against Mahua Moitra under new criminal law for making derogatory remarks against NCW chief

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (NCW Chief) ಅಧ್ಯಕ್ಷೆ ರೇಖಾ ಶರ್ಮಾ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜುಲೈ 1ರಂದು ಜಾರಿಗೆ ಬಂದ ಹೊಸ ಕಾನೂನುಗಳ ಪೈಕಿ ಒಂದಾದ ಭಾರತೀಯ ನ್ಯಾಯ ಸಂಹಿತೆ (BNS) ಅನ್ವಯ ಮಹುವಾ ಮೊಯಿತ್ರಾ ಅವರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಮಹುವಾ ಮೊಯಿತ್ರಾ ಹೇಳಿದ್ದೇನು?

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತದಿಂದ 121 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ರೇಖಾ ಶರ್ಮಾ ಅವರು ಹತ್ರಾಸ್‌ಗೆ ಭೇಟಿ ನೀಡಿದ ವಿಡಿಯೊವನ್ನು ಮಹುವಾ ಮೊಯಿತ್ರಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, “ತಮ್ಮ ಬಾಸ್‌ನ ಪೈಜಾಮಾ ಹಿಡಿದುಕೊಳ್ಳುವುದರಲ್ಲಿಯೇ ಇವರು ನಿರತರಾಗಿದ್ದಾರೆ” ಎಂಬುದಾಗಿ ಟಿಎಂಸಿ ಸಂಸದೆ ಬರೆದುಕೊಂಡಿದ್ದರು.

ಮಹುವಾ ಮೊಯಿತ್ರಾ ಅವರ ಪೋಸ್ಟ್‌ ವೈರಲ್‌ ಆಗುತ್ತಲೇ ರಾಷ್ಟ್ರೀಯ ಮಹಿಳಾ ಆಯೋಗವು ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ, ಟಿಎಂಸಿ ಸಂಸದೆ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ದೆಹಲಿ ಪೊಲೀಸರಿಗೆ ಸೂಚಿಸಲಾಗಿತ್ತು. ಅಲ್ಲದೆ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೂ ರಾಷ್ಟ್ರೀಯ ಮಹಿಳಾ ಆಯೋಗವು ಪತ್ರ ಬರೆದು, ಮಹುವಾ ಮೊಯಿತ್ರಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಮನವಿ ಮಾಡಿತ್ತು. ಈಗ ಸಂಸದೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ವಿವಾದಗಳಿಗೂ ಮಹುವಾ ಮೊಯಿತ್ರಾ ಅವರಿಗೂ ಎಲ್ಲಿಲ್ಲದ ನಂಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿಯ ನಿಶಿಕಾಂತ್‌ ದುಬೆ ಆರೋಪ ಮಾಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಕುರಿತು ತನಿಖೆ ಕೂಡ ನಡೆಸಲಾಗಿತ್ತು. “ಉದ್ಯಮಿ ದರ್ಶನ್‌ ಹಿರಾನಂದನಿ ಅವರಿಗೆ ಸಂಸತ್‌ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದು ನಿಜ. ಆದರೆ, ಹಣ ಪಡೆದು ಪ್ರಶ್ನೆ ಕೇಳುವ ದಿಸೆಯಲ್ಲಿ ಐಡಿ, ಪಾಸ್‌ವರ್ಡ್‌ ಕೊಟ್ಟಿಲ್ಲ” ಎಂಬುದಾಗಿ ಮಹುವಾ ಮೊಯಿತ್ರಾ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು.

ಇದನ್ನೂ ಓದಿ: Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Exit mobile version