ಚೆನ್ನೈ: ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಭರಾಟೆಯು ದಿನೇದಿನೆ ಕಾವು ಪಡೆದುಕೊಳ್ಳುತ್ತಿದೆ. ಇದೇ ಚುನಾವಣೆ ಪ್ರಚಾರದ ಅಬ್ಬರದಿಂದಾಗಿಯೇ ಕೊಯಮತ್ತೂರಿನಲ್ಲಿ ಬಿಜೆಪಿ ಹಾಗೂ ಡಿಎಂಕೆ ಕಾರ್ಯಕರ್ತರ ಮಧ್ಯೆ ಸಂಘರ್ಷವೇ (BJP DMK Workers) ನಡೆದಿದೆ. ಹಾಗಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅಣ್ಣಾಮಲೈ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿರುವ ಅವರಂಪಾಳಯಂ ಪ್ರದೇಶದಲ್ಲಿ ಗುರುವಾರ ರಾತ್ರಿ (ಏಪ್ರಿಲ್ 12) ಅಣ್ಣಾಮಲೈ ಅವರು ಚುನಾವಣಾ ಸಮಾವೇಶ ಆಯೋಜಿಸಿದ್ದರು. ಆದರೆ, ರಾತ್ರಿ 10 ಗಂಟೆ ಬಳಿಕವೂ ಸಮಾವೇಶ ಮುಂದುವರಿದಿದೆ. ಇದೇ ವೇಳೆ, ಡಿಎಂಕೆ ಸೇರಿ ಹಲವು ಪಕ್ಷಗಳ ನಾಯಕರು ಅಣ್ಣಾಮಲೈ ರ‍್ಯಾಲಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಡಿಎಂಕೆ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
#WATCH | Tamil Nadu BJP President K Annamalai held a roadshow in Coimbatore.
— ANI (@ANI) April 11, 2024
BJP has fielded K Annamalai from Coimbatore Lok Sabha seat. pic.twitter.com/C39qulKIVw
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೊಯಮತ್ತೂರು ಬಿಜೆಪಿ ಅಭ್ಯರ್ಥಿಯೂ ಆಗಿರುವ ಅಣ್ಣಾಮಲೈ ವಿರುದ್ಧ ಡಿಎಂಕೆ ನಾಯಕ ಪೀಲಮೇಡು ಅವರು ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಆಯೋಗ ಜಾರಿಗೆ ತಂದಿರುವ ಮಾದರಿ ನೀತಿ ಸಂಹಿತೆ ಅನ್ವಯ ರಾತ್ರಿ 10 ಗಂಟೆಯ ನಂತರ ಚುನಾವಣಾ ರ‍್ಯಾಲಿ, ಸಮಾವೇಶ ನಡೆಸುವಂತಿಲ್ಲ. ಆದರೆ, ರಾತ್ರಿ 10 ಗಂಟೆ ಬಳಿಕವೂ ಅಣ್ಣಾಮಲೈ ಅವರು ಸಮಾವೇಶ ನಡೆಸಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದೂ ಡಿಎಂಕೆ ನಾಯಕರು ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆ ಸೇರಿ ಹಲವು ಸ್ಥಳೀಯ ಪಕ್ಷಗಳ ಪ್ರಾಬಲ್ಯದ ಮಧ್ಯೆಯೂ ನೆಲೆಯೂರಲು ಪ್ರಯತ್ನಿಸುತ್ತಿದೆ. ಅದರಲ್ಲೂ, ಕೆ. ಅಣ್ಣಾಮಲೈ ಅವರ ಖ್ಯಾತಿಯು ಹೆಚ್ಚುತ್ತಿದೆ. ಕೊಯಮತ್ತೂರಿನಲ್ಲಿ ಅಣ್ಣಾಮಲೈ ವಿರುದ್ಧ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ಹಾಗೂ ಎಐಎಡಿಎಂಕೆಯಿಂದ ಸಿಂಗೈ ರಾಮಚಂದ್ರನ್ ಅವರು ಕಣಕ್ಕಿಳಿದಿದ್ದಾರೆ. ಕೊಯಮತ್ತೂರು ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿರುವ ಅಣ್ಣಾಮಲೈ ಅವರು ಗೆಲುವಿನ ಉತ್ಸಾಹದಲ್ಲಿದ್ದಾರೆ. ಇದಕ್ಕಾಗಿ ಸಾಲು ಸಾಲು ಸಮಾವೇಶಗಳನ್ನು ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ: K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ