Site icon Vistara News

Fire Accident: ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ; 7 ತಿಂಗಳ ಮಗು ಸಹಿತ ಐವರ ಸಜೀವ ದಹನ

Fire Accident

Fire Accident

ಲಕ್ನೋ: ಕುವೈತ್‌ನ ಮಂಗಾಫ್ ನಗರದಲ್ಲಿರುವ ಆರು ಮಹಡಿಯ ಬೃಹತ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿಯೂ ಅಗ್ನಿ ಅವಘಡ ಸಂಭವಿಸಿದೆ. ಗಾಜಿಯಾಬಾದ್‌ ಜಿಲ್ಲೆಯ ಲೋನಿ ಗಡಿ ಪ್ರದೇಶದ ಬೆಹ್ತಾ ಹಾಜಿಪುರ ಗ್ರಾಮದ ಮನೆಯೊಂದರಲ್ಲಿ ಬುಧವಾರ (ಜೂನ್‌ 12) ರಾತ್ರಿ ಕಾಣಿಸಿಕೊಂಡ ಈ ಬೆಂಕಿಗೆ 7 ತಿಂಗಳ ಮಗು ಸೇರಿದಂತೆ ಐವರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ (Fire Accident).

ʼʼಸದ್ಯ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಮಹಿಳೆ ಮತ್ತು ಮಗು ಸೇರಿದಂತೆ ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆʼʼ ಎಂದು ಗಾಜಿಯಾಬಾದ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಪಿ. ಹೇಳಿದ್ದಾರೆ. ದುರಂತದ ಬಗ್ಗೆ ಮಾಹಿತಿ ನೀಡಿದ ಅವರು, “ಜೂನ್ 12ರ ತಡರಾತ್ರಿ ಲೋನಿ ಪ್ರದೇಶದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಕರೆ ಬಂದಿತ್ತು. ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರುʼʼ ಎಂದು ಹೇಳಿದ್ದಾರೆ.

“ಮಹಿಳೆ ಮತ್ತು ಮಗು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯು ನೆಲಮಹಡಿಯಿಂದ ಮೇಲಿನ ಮಹಡಿಗಳಿಗೆ ಹರಡಿತ್ತು. ಮೊದಲ ಮತ್ತು ಎರಡನೇ ಮಹಡಿಗಳಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. ಅದಾಗ್ಯೂ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅವರನ್ನು ಗುರುತಿಸಲಾಗುತ್ತಿದೆ. ಮೃತರಲ್ಲಿ ಮಕ್ಕಳು, ವಯಸ್ಕರು ಮತ್ತು ವೃದ್ಧರು ಸೇರಿದ್ದಾರೆ. ಘಟನೆಯಲ್ಲಿ ಏಳು ವರ್ಷದ ಬಾಲಕಿ ಮತ್ತು ಏಳು ತಿಂಗಳ ಮಗು ಸಹ ಸಾವನ್ನಪ್ಪಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆʼʼ ಎಂದು ದಿನೇಶ್ ಕುಮಾರ್ ತಿಳಿಸಿದ್ದಾರೆ.

“ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಮನೆಯಲ್ಲಿ ಫೋಮ್ ಕ್ಯೂಬ್‌ಗಳು ಇದ್ದವು. ಇದರಿಂದ ಬೆಂಕಿ ಬಹಳ ಬೇಗ ಕಟ್ಟಡಕ್ಕೆ ವ್ಯಾಪಿಸಿದೆ. ಆದಾಗ್ಯೂ ಬೆಂಕಿ ದುರಂತದ ಕಾರಣವನ್ನು ವಿಚಾರಣೆ ಮೂಲಕ ಕಂಡು ಹಿಡಿಯಲಾಗುವುದುʼʼ ಎಂದು ಅವರು ಹೇಳಿದ್ದಾರೆ.

ಕುವೈತ್‌ ಬೆಂಕಿ ದುರಂತ: ಮೃತರ ಸಂಖ್ಯೆ 49ಕ್ಕೆ ಏರಿಕೆ

ಕುವೈತ್‌ನ ಮಂಗಾಫ್ ನಗರದಲ್ಲಿರುವ ಆರು ಮಹಡಿಯ ಬೃಹತ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದೆ. ಈ ಪೈಕಿ ಬಹುತೇಕ ಮಂದಿ ಭಾರತೀಯರು ಎನ್ನಲಾಗಿದೆ. ಆರು ಮಹಡಿಯ ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಕೂಡ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭಗೊಂಡಿತ್ತು. ಬೆಂಕಿಯನ್ನು ನೋಡಿದ ನಂತರ ಕೆಲವರು ಅಪಾರ್ಟ್​ಮೆಂಟ್​ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Kuwait Fire: ಕುವೈತ್‌ನಲ್ಲಿ ಭೀಕರ ಅಗ್ನಿ ದುರಂತಕ್ಕೆ 41 ಭಾರತೀಯರ ಬಲಿ; ದಕ್ಷಿಣ ಭಾರತದವರೇ ಹೆಚ್ಚು!

Exit mobile version