Site icon Vistara News

Fire Accident: 4 ವರ್ಷ ನೀವು ನಿದ್ದೆಯಲ್ಲಿದ್ರಾ? ನಿಮಗೆ ಕಣ್ಣು ಕಾಣೋದಿಲ್ವಾ?-ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Fire accident

ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ (Fire Accident) ಸಂಬಂಧಿಸಿದಂತೆ ಹೈಕೋರ್ಟ್‌ ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಗತ್ಯ ಅನುಮತಿ ಅಥವಾ ಪರವಾಣಗಿ ಪಡೆಯದೇ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಗೇಮಿಂಗ್‌ ಜೋನ್‌ ಬಗ್ಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಗುಜರಾತ್‌ ರಾಜ್‌ಕೋಟ್‌ ಮಹಾನಗರಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ನಾಲ್ಕು ವರ್ಷಗಳ ಕಾಲ ನೀವು ನಿದ್ದೆಯಲ್ಲಿದ್ದಿರೇ? ನಿಮಗೆ ಕಣ್ಣು ಕಾಣುವುದಿಲ್ಲವೇ? ಎಂದು ಕಟುವಾಗಿ ಪ್ರಶ್ನಿಸಿದೆ. ಅಲ್ಲದೇ ಇನ್ನು ಮುಂದೆ ರಾಜ್‌ ಕೋಟ್‌ ಸ್ಥಳೀಯಾಡಳಿತ ಮತ್ತು ರಾಜ್ಯ ಸರ್ಕಾರವನ್ನು ನಂಬಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಅಲ್ಲದೇ ಘಟನೆಯಲ್ಲಿ ಒಂಬತ್ತು ಮಕ್ಕಳು ಸೇರಿದಂತೆ 28 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಹೇಳಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು ಬೆಂಕಿ ಅವಘಡ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಕೋರ್ಟ್‌ ಕೂಡ ಅನೇಕ ಸಲಹೆ ಸೂಚನೆ, ತೀರ್ಪನ್ನೂ ನೀಡಿತ್ತು. ಅದಾಗಿಯೂ ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯುತ್ತಿದೆ ಎಂದಾದರೆ ಅದು ಸರ್ಕಾರ ಬೆಜವಾಬ್ದಾರಿಯುತ ನಡೆ ಎಂದು ಕೋರ್ಟ್‌ ಅಸಮಾಧಾನ ಹೊರ ಹಾಕಿದೆ.

ಶನಿವಾರ ರಾಜ್‌ಕೋಟ್‌ನಲ್ಲಿರುವ ಗೇಮಿಂಗ್‌ ಜೋನ್‌ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 28 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ.

ಇದನ್ನೂ ಓದಿ: MLC Election: ಕಾಂಗ್ರೆಸ್ ಎಂಬುದು ದೇಶದಲ್ಲಿ ರಿಜೆಕ್ಟೆಡ್, ಎಕ್ಸ್‌ಪೈರಿ ಗೂಡ್ಸ್: ಪ್ರಲ್ಹಾದ್ ಜೋಶಿ ಲೇವಡಿ

ಇನ್ನು ಎರಡು ಅಂತಸ್ತಿನ ಶೆಡ್‌ನಲ್ಲಿ ನಿರ್ಮಿಸಲಾಗಿದ್ದ ರಾಜ್‌ಕೋಟ್‌ ಗೇಮಿಂಗ್‌ ಜೋನ್‌ಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವೇ ಸಿಕ್ಕಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ರಾಜ್‌ಕೋಟ್‌ ಮೇಯರ್‌ ನಯನಾ ಪೆಢಾದಿಯಾ ಅವರೇ ಮಾಹಿತಿ ನೀಡಿದ್ದಾರೆ. “ನೋ ಅಬ್ಜೆಕ್ಷನ್‌ ಸರ್ಟಿಫಿಕೇಟ್‌ ಇಲ್ಲದೆಯೇ ಗೇಮಿಂಗ್‌ ಜೋನ್‌ ಕಾರ್ಯನಿರ್ವಹಿಸುತ್ತಿದ್ದ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯಾದ ರಾಜಕೀಯ ನುಸುಳದಂತೆ ತನಿಖೆ ನಡೆಸಲಾಗುತ್ತದೆ. ಇದು ಸಣ್ಣ ಸಂಗತಿ ಅಲ್ಲ” ಎಂಬುದಾಗಿ ಮಾಹಿತಿ ನೀಡಿದ್ದಾರೆ. ಈ ನಡುವೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Exit mobile version