ಚೆನ್ನೈ, ತಮಿಳುನಾಡು: ಬೆಂಗಳೂರಿನ ಅತ್ತಿಬೆಲೆ ಪಟಾಕಿ ಬೆಂಕಿ ಅವಘಡ ಜನಮಾನಸದಿಂದ ಮರೆಯುವ ಮುನ್ನವೇ ತಮಿಳುನಾಡಿನ (Tamil Nadu) ಶಿವಕಾಶಿಯ (Shivakashi) ಎರಡು ಕಡೆ ಸಂಭವಿಸಿದ ಪಟಾಕಿ ಬೆಂಕಿ ದುರಂತದಲ್ಲಿ (Firecracker Units Explosion) ಒಟ್ಟು 9 ಮಹಿಳೆಯರು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ. ಪಟಾಕಿಗಳನ್ನು ಪರೀಕ್ಷಿಸುವಾಗ ಎರಡು ಪಟಾಕಿ ಘಟಕಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿಗೆ ಆಹುತಿಯಾದ ಎರಡೂ ಮಳಿಗೆಗಳು ಅನುಮತಿಯನ್ನು ಹೊಂದಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ. ಪಟಾಕಿ ಬೆಂಕಿ ಅವಘಡದಲ್ಲಿ ಮೃತಪಟ್ಟವರಿಗೆ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರು ಕಂಬನಿ ಮಿಡಿದಿದ್ದಾರೆ. ಅಲ್ಲದೇ, ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರವನ್ನುಪ್ರಕಟಿಸಿದ್ದಾರೆ.
16 ಮಂದಿಯನ್ನು ಬಲಿ ಪಡೆದ ಅತ್ತಿಬೆಲೆ ಪಟಾಕಿ ಅಂಗಡಿ ಅಗ್ನಿ ದುರಂತ
ವಾರದ ಹಿಂದೆ ಬೆಂಗಳೂರಲ್ಲಿ ಸಂಭವಿಸಿದ ಅತ್ತಿಬೆಲೆ ಪಟಾಕಿ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ. ಅತ್ತಿಬೆಲೆ ಗಡಿಭಾಗದ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ (Fire Accident) 13 ಮಂದಿ ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಶನಿವಾರ ಮಧ್ಯಾಹ್ನ ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ 6 ಮಂದಿ ಗಂಭೀರವಾಗಿ ಗಾಯಗೊಂಡು, ಹಲವರು ನಾಪತ್ತೆಯಾಗಿದ್ದರು. ಆದರೆ, ನಾಪತ್ತೆಯಾಗಿದ್ದ 13 ಕಾರ್ಮಿಕರು ಸಜೀವ ದಹನವಾಗಿದ್ದು, ಮೃತದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Fire Tragedy : ಅತ್ತಿಬೆಲೆ ದುರಂತ ಬಲಿ 16ಕ್ಕೆ; ಸ್ನೇಹಿತನ ಬರ್ತ್‌ಡೇಗೆ ಪಟಾಕಿ ಕೊಳ್ಳಲು ಹೋಗಿ ಬಾಡಿಬಿಲ್ಡರ್ ಸಾವು
ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್ ಮಾಡುವಾಗ ಈ ಅವಘಡ ಸಂಭವಿಸಿದೆ.