ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ, ಮೊದಲ ಮಾನವಸಹಿತ ಗಗನಯಾತ್ರೆಯಾದ ‘ಗಗನಯಾನ’ಕ್ಕೆ ಭಾರತವು (Gaganyaan) ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಗಗನಯಾನದ ಕುರಿತು ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಮುಂದಿನ ಮೇ ತಿಂಗಳಲ್ಲಿ ಗಗನಯಾನ ಮಿಷನ್‌ನ ಪರೀಕ್ಷಾರ್ಥ ಉಡಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
“ಮೊದಲ ಟೆಸ್ಟ್ ವೆಹಿಕಲ್ ಮಿಷನ್ ಟಿವಿ-ಡಿ1ಅನ್ನು (TV-D1) 2023ರ ಮೇ ತಿಂಗಳಲ್ಲಿ ಕೈಗೊಳ್ಳಲಾಗುತ್ತದೆ. ಮಾನವ ರಹಿತವಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗುತ್ತಿದೆ. ಮೊದಲನೇ ಪರೀಕ್ಷೆ ಮುಗಿದ ಬಳಿಕ ಎರಡನೇ ಪರೀಕ್ಷೆಯನ್ನು (LVM3-G1) 2024ರ ಮೊದಲ ತ್ರೈಮಾಸಿಕದಲ್ಲಿ ಕೈಗೊಳ್ಳಲಾಗುತ್ತದೆ. ಪರೀಕ್ಷಾರ್ಥವಾಗಿ ಎರಡೂ ಉಡಾವಣೆಗಳನ್ನು ಮಾನವ ರಹಿತವಾಗಿ ಕೈಗೊಳ್ಳಲಾಗುತ್ತದೆ. ಎರಡೂ ಪರೀಕ್ಷೆಗಳ ಬಳಿಕ 2024ರ ಕೊನೆಯಲ್ಲಿ ಮಾನವಸಹಿತವಾಗಿ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
ಇಸ್ರೊ ಉಡಾವಣೆಗಳ ಪಟ್ಟಿ
“ಮಾನವ ಸಹಿತ ಉಡಾವಣೆಗೂ ಮುನ್ನ ಹೀಗೆ ನಾಲ್ಕು ಪರೀಕ್ಷೆಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. ಗಗನಯಾನ ಮಿಷನ್‌ಗೆ 3,040 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಆಯಾಮಗಳನ್ನು ಗಮನಿಸಿ, ಎಲ್ಲ ಸಿದ್ಧತೆ ಪೂರ್ಣಗೊಂಡ ಬಳಿಕ ಉಡಾವಣೆ ಮಾಡಲಾಗುತ್ತದೆ” ಎಂದು ಸಚಿವ ಮಾಹಿತಿ ನೀಡಿದರು.
ಇದುವರೆಗಿನ ಪ್ರಗತಿ ಏನು?
“ಉನ್ನತ ಮಾರ್ಜಿನ್‌ಗಳ ವ್ಯಾಪ್ತಿಯ ಎಲ್ಲ ಪ್ರಾಪಲ್ಶನ್ ಸಿಸ್ಟಮ್‌ಗಳ ಟೆಸ್ಟ್‌ಗಳನ್ನು ಈಗಾಗಲೇ ಮುಗಿಸಲಾಗಿದೆ. ಟಿವಿ-ಡಿ1 ಮಿಷನ್‌ಗೆ ಟೆಸ್ಟ್ ವೆಹಿಕಲ್‌ಅನ್ನು ವಿನ್ಯಾಸಗೊಳಿಸಲಾಗಿದೆ. ಕ್ರ್ಯೂ ಮಾಡ್ಯೂಲ್ ಸ್ಟ್ರಕ್ಚರ್ ಕೂಡ ಸಿದ್ಧವಾಗಿದೆ” ಎಂದು ಸಚಿವ ತಿಳಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಗಗನಯಾನ ಮಿಷನ್ ಜಾರಿಯು ಭಾರಿ ವಿಳಂಬವಾಗಿದೆ. ಆದರೆ, ಕೊರೊನಾ ಬಿಕ್ಕಟ್ಟಿನ ಬಳಿಕ ಪರಿಸ್ಥಿತಿ ತಿಳಿಯಾದ ಕಾರಣ ಗಗನಯಾನದ ಸಿದ್ಧತೆ ಭರದಿಂದ ಸಾಗುತ್ತಿದೆ.
ಮಾನವಸಹಿತ ಗಗನಯಾನ ಮಿಷನ್‌ಗೆ ನಾಲ್ವರು ಫೈಟರ್ ಪೈಲಟ್‌ಗಳನ್ನು ಭಾರತೀಯ ವಾಯು ಪಡೆಯು ಗುರುತಿಸಿದೆ. ಹೀಗೆ ಗುರುತಿಸಲಾದ ಪೈಲಟ್‌ಗಳು ರಷ್ಯಾದಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ಇದುವರೆಗೆ ಸಿಸ್ಟಮ್ ಮೋಟರ್‌ಗಳನ್ನು ಸಿದ್ಧಗೊಳಿಸಲಾಗಿದೆ. ಬ್ಯಾಚ್ ಟೆಸ್ಟಿಂಗ್ ಈಗ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Gaganyaan | ದೇಶದ ಗಗನ ಯಾನಕ್ಕೆ ಬಾಹ್ಯಾಕಾಶದಿಂದಲೇ ಶುಭ ಕೋರಿದ ಇಟಲಿ ಗಗನಯಾತ್ರಿ