ನವದೆಹಲಿ: ಸಮರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ಪ್ರಾರಂಭಿಸಿರುವ ‘ಆಪರೇಷನ್ ಕಾವೇರಿ (Operation Kaveri)’ ಯಶಸ್ಸು ಸಾಧಿಸುತ್ತಿದ್ದು, ಮೊದಲ ಹಂತದಲ್ಲಿ ಸುಡಾನ್‌ನಿಂದ 360 ಭಾರತೀಯರು ಬುಧವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ.
“ಭಾರತವು ತನ್ನ ನಾಡಿನ ನಾಗರಿಕರನ್ನು ಸ್ವಾಗತಿಸುತ್ತಿದೆ. ಆಪರೇಷನ್ ಕಾವೇರಿ ಮೂಲಕ ಸುಡಾನ್‌ನಿಂದ ಮೊದಲ ಹಂತದಲ್ಲಿ ವಿಮಾನದ ಮೂಲಕ 360 ಜನ ದೆಹಲಿಗೆ ಆಗಮಿಸಿದ್ದಾರೆ” ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಸುಡಾನ್‌ನಿಂದ ಭಾರತಕ್ಕೆ ಆಗಮಿಸಿದ ನಾಗರಿಕರ ಫೋಟೊಗಳನ್ನೂ ಅವರು ಶೇರ್ ಮಾಡಿದ್ದಾರೆ.
ತಾಯ್ನಾಡಿಗೆ ಬಂದವರ ಸಂತಸ
ಭಾರತ್ ಮಾತಾ ಕೀ ಜೈ ಘೋಷಣೆ
ಸಮರಪೀಡಿತ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿ, ಪ್ರಾಣಭೀತಿಯಲ್ಲಿದ್ದ ಭಾರತೀಯರನ್ನು ಕೇಂದ್ರ ಸರ್ಕಾರವು ರಕ್ಷಿಸುತ್ತಿದ್ದು, ಬುಧವಾರ ರಾತ್ರಿ ನವದೆಹಲಿಗೆ ಆಗಮಿಸುತ್ತಲೇ ಭಾರತೀಯರ ಸಂತಸ ಮುಗಿಲುಮುಟ್ಟಿತ್ತು. ಅಷ್ಟೇ ಏಕೆ, ಭಾರತ್ ಮಾತಾ ಕೀ ಜೈ, ಆರ್ಮಿ ಜಿಂದಾಬಾದ್, ನರೇಂದ್ರ ಮೋದಿ ಜಿಂದಾಬಾದ್ ಎಂಬ ಘೋಷಣೆಗಳನ್ನೂ ಕೂಗಿದರು. ಸುಡಾನ್‌ನಲ್ಲಿ ಕರ್ನಾಟಕದವರೂ ಸಿಲುಕಿದ್ದು, ಎಲ್ಲರನ್ನೂ ರಕ್ಷಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ತೊಡಗಿದೆ.
ಸಚಿವ ಜೈಶಂಕರ್ ಟ್ವೀಟ್
ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ದೇಶ ರಕ್ಷಣೆ ಮಾಡಬೇಕಾದವರೇ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಪರಿಣಾಮ ಈಗಾಗಲೇ ಅಲ್ಲಿನ ಸುಮಾರು 400 ಮಂದಿ ಮೃತಪಟ್ಟಿದ್ದಾರೆ. ಭಾರತ, ಸೌದಿ ಅರೇಬಿಯಾ, ಅಮೆರಿಕ ಮತ್ತು ಇತರ ದೇಶಗಳ ಜನರು ಸುಡಾನ್ನಲ್ಲಿದ್ದು, ಅವರ ರಕ್ಷಣಾ ಕಾರ್ಯಾಚರಣೆಯನ್ನು ಆಯಾ ದೇಶಗಳು ನಡೆಸುತ್ತಿವೆ. ಹೀಗೆ ಬೇರೆ ದೇಶಗಳ ನಾಗರಿಕರ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಬೇಕಾಗಿರುವ ಕಾರಣಕ್ಕೆ ಸುಡಾನ್ ಸೋಮವಾರದಿಂದ 72ಗಂಟೆಗಳ ಕಾಲ ಕದನ ವಿರಾಮ ಘೋಷಿಸಿಕೊಂಡಿದೆ. ಭಾರತದ ಸುಮಾರು 3,000 ಜನರು ಸುಡಾನ್ನಲ್ಲಿದ್ದು, ಅವರೆಲ್ಲರನ್ನೂ ಭಾರತಕ್ಕೆ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Operation Kaveri: ಸುಡಾನ್‌ನಲ್ಲಿನ ಭಾರತೀಯರ ಸ್ಥಳಾಂತರಕ್ಕೆ ‘ಆಪರೇಷನ್ ಕಾವೇರಿ’ ಶುರು, ಸಿದ್ದರಾಮಯ್ಯ ಧನ್ಯವಾದ