ನವದೆಹಲಿ: ದೇಶದಲ್ಲಿ ಮಹಿಳಾ ಸಬಲೀಕರಣವಾಗುತ್ತಿದೆ. ಬಸ್ ಕಂಡಕ್ಟರ್ ಹುದ್ದೆಯಿಂದ ಹಿಡಿದು ಭಾರತೀಯ ವಾಯುಪಡೆಯ ಯುದ್ಧವಿಮಾನವನ್ನು ಹಾರಿಸುವತನಕ ಸಕಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ. ಬರೀ ಕಾರ್ಯನಿರ್ವಹಣೆ ಅಷ್ಟೇ ಅಲ್ಲ, ತಮ್ಮ ಕಾರ್ಯಕ್ಷಮತೆ, ದಕ್ಷತೆಯಿಂದಲೂ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ದಕ್ಷಿಣ ರೈಲ್ವೆ (Southern Railway) ವಿಭಾಗದಲ್ಲಿ ಟಿಕೆಟ್ ಕಲೆಕ್ಟರ್ ಆಗಿರುವ ರೊಸಾಲಿನ್ ಅರೋಕಿಯಾ ಮೇರಿ (Rosaline Arokia Mary) ಒಂದೇ ವರ್ಷದಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ದಂಡವನ್ನು ಸಂಗ್ರಹಿಸುವ ಮೂಲಕ, ಇಷ್ಟು ದಂಡ ಸಂಗ್ರಹಿಸಿದ ದೇಶದ ಮೊದಲ ಮಹಿಳಾ ಟಿಸಿ (Woman Ticket Checker) ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಹೌದು, ರೊಸಾಲಿನ್ ಅರೋಕಿಯಾ ಮೇರಿ ಅವರು ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣಿಸುವವರನ್ನು ಪತ್ತೆಹಚ್ಚಿ, ಅವರಿಗೆ ದಂಡ ವಿಧಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ರೈಲುಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವ ಇವರು, ಟಿಕೆಟ್ ಇಲ್ಲದ ಪ್ರಯಾಣಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿ ದಂಡ ವಿಧಿಸಿದ್ದಾರೆ. ಒಂದು ವರ್ಷದಲ್ಲಿ ರೊಸಾಲಿನ್ ಅರೋಕಿಯಾ ಮೇರಿ ಅವರು 2022ರ ಏಪ್ರಿಲ್‌ನಿಂದ 2023ರ ಮಾರ್ಚ್ ಅವಧಿಯಲ್ಲಿ ದಂಡ ವಿಧಿಸಿ 1.03 ಕೋಟಿ ರೂ. ಸಂಗ್ರಹಿಸಿದ್ದಾರೆ.
ರೈಲ್ವೆ ಸಚಿವಾಲಯದಿಂದಲೇ ಮೆಚ್ಚುಗೆ
ರೊಸಾಲಿನ್ ಅರೋಕಿಯಾ ಮೇರಿ ಅವರ ಕಾರ್ಯಕ್ಷಮತೆಯನ್ನು ರೈಲ್ವೆ ಸಚಿವಾಲಯವೇ ಶ್ಲಾಘಿಸಿದೆ. “ಕಾರ್ಯ ನಿರ್ವಹಣೆಯಲ್ಲಿ ದಕ್ಷತೆ ಮೆರೆದ ರೊಸಾಲಿನ್ ಅರೋಕಿಯಾ ಮೇರಿ ಅವರು ದಂಡದಿಂದ ಸಂಗ್ರಹಿಸಿದ ಮೊತ್ತ ಒಂದು ಕೋಟಿ ರೂಪಾಯಿ ದಾಟಿದೆ. ಆ ಮೂಲ ಅವರು ಇಷ್ಟೊಂದು ದಂಡ ಸಂಗ್ರಹಿಸಿದ ದೇಶದ ಮೊದಲ ಮಹಿಳಾ ಟಿಸಿ ಎನಿಸಿದ್ದಾರೆ” ಎಂದು ಟ್ವೀಟ್ ಮಾಡಿದೆ. ಹಾಗೆಯೇ, ರೊಸಾಲಿನ್ ಅರೋಕಿಯಾ ಮೇರಿ ಅವರ ಫೋಟೊಗಳನ್ನು ಕೂಡ ಹಂಚಿಕೊಂಡಿದೆ. ರೊಸಾಲಿನ್ ಅವರ ವೃತ್ತಿಬದ್ಧತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವರೇ ರೊಸಾಲಿನ್ ಅರೋಕಿಯಾ ಮೇರಿ
ಮೂವರು ಟಿಸಿಗಳಿಂದ ಕೋಟಿ ರೂ. ಸಂಗ್ರಹ ಸಾಧನೆ
2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ನ ಹಣಕಾಸು ವರ್ಷದಲ್ಲಿ ರೊಸಾಲಿನ್ ಅವರು ಸೇರಿ ರೈಲ್ವೆ ಇಲಾಖೆಯ ಮೂವರು ಒಂದು ಕೋಟಿ ರೂ. ದಂಡ ಸಂಗ್ರಹಿಸಿದ ಸಾಧನೆ ಮಾಡಿದ್ದಾರೆ. ಚೆನ್ನೈ ವಿಭಾಗದ ಡೆಪ್ಯುಟಿ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಆಗಿರುವ ಎಸ್. ನಂದಕುಮಾರ್ ಅವರು 1.55 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಹಾಗೆಯೇ, ಸೀನಿಯರ್ ಟಿಕೆಟ್ ಎಕ್ಸಾಮಿನರ್ ಆಗಿರುವ ಶಕ್ತಿವೇಲ್ ಅವರು 1.10 ಕೋಟಿ ರೂ. ದಂಡ ಸಂಗ್ರಹಿಸಿ ದಕ್ಷತೆ ಮೆರೆದಿದ್ದಾರೆ. ಇವರ ಕಾರ್ಯಕ್ಷಮತೆಯನ್ನೂ ರೈಲ್ವೆ ಇಲಾಖೆ ಕೊಂಡಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Traffic Fine: ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ; 5 ದಿನದಲ್ಲಿ 50 ಕೋಟಿ ರೂ. ದಾಟಿದ ದಂಡ ಸಂಗ್ರಹ