ನವ ದೆಹಲಿ: ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ ಬರಲಿರುವ ಚಿರತೆಗಳ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ನಶಿಸಿ ಹೋಗಿರುವ ಚಿರತೆ ಸಂತತಿಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ನಮೀಬಿಯಾದಿಂದ ಐದು ಗಂಡು ಮತ್ತು ಮೂರು ಹೆಣ್ಣು ಸೇರಿ ಒಟ್ಟು ಎಂಟು ಚೀತಾಗಳನ್ನು ಭಾರತಕ್ಕೆ ತರುತ್ತಿದೆ. ಈ ಚಿರತೆಗಳು ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ ದಿನವಾದ ಸೆಪ್ಟೆಂಬರ್ 17ರಂದೇ ಆಗಮಿಸುತ್ತಿರುವುದು ವಿಶೇಷವೆನ್ನಿಸಿದೆ.
ಈ ಚೀತಾಗಳನ್ನು ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಪಾಲ್ಪುರ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗುತ್ತಿದೆ. ಚೀತಾಗಳನ್ನು ಅಲ್ಲಿಂದ ಒಂದು ವಿಶೇಷ ಕಾರ್ಗೋ ವಿಮಾನ (ಸರಕು ವಿಮಾನ)ದಲ್ಲಿ ಕರೆದುಕೊಂಡು ಬರಲಾಗುತ್ತಿದೆ. ನಮೀಬಿಯಾದಿಂದ ಹೊರಟ ಈ ವಿಮಾನ ಗ್ವಾಲಿಯರ್ನಲ್ಲಿ ಲ್ಯಾಂಡ್ ಆಗಲಿದೆ. ವಿಮಾನ ಜೈಪುರದಲ್ಲಿ ಲ್ಯಾಂಡ್ ಆಗಿ, ಅಲ್ಲಿಂದ ಮಧ್ಯಪ್ರದೇಶಕ್ಕೆ ಹೋಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಈಗ ಪ್ಲ್ಯಾನ್ ಚೇಂಜ್ ಆಗಿದೆ. ನೇರವಾಗಿ ಗ್ವಾಲಿಯರ್ಗೇ ಹೋಗಲಿದೆ. ಅಂದಹಾಗೇ, ನಾಳೆ ಮುಂಜಾನೆ 6ಗಂಟೆಗೇ ಚಿರತೆಗಳು ಗ್ವಾಲಿಯರ್ ತಲುಪಲಿವೆ.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನವೇ ಭಾರತಕ್ಕೆ ಬರುತ್ತಿರುವ ಚಿರತೆಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿರುವ ಕುನೋ ಪಾಲ್ಪುರ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10.45ರ ಹೊತ್ತಿಗೆ ಅವರು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಕೊಡುವರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಇದನ್ನೂ ಓದಿ: Cheetah | ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದೇ ಭಾರತಕ್ಕೆ ಬರಲಿವೆ ಎಂಟು ಚೀತಾಗಳು!