Site icon Vistara News

Monsoon Session: ಹೊಸ ಸಂಸತ್‌ ಭವನದಲ್ಲಿ ಮೊದಲ ಬಾರಿಗೆ ಜುಲೈನಲ್ಲಿ ಮಳೆಗಾಲದ ಅಧಿವೇಶನ

First Session In New Parliament Building

First session in the new Parliament, Monsoon session likely to start from July 17

ನವದೆಹಲಿ: ನೂತನ, ಅತ್ಯಾಧುನಿಕ ಸೌಕರ್ಯಗಳುಳ್ಳ, ಅದ್ಭುತ ನೂತನ ಸಂಸತ್‌ ಭವನದಲ್ಲಿ ಮೊದಲ ಅಧಿವೇಶನ (Monsoon Session) ನಡೆಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಜುಲೈ 17ರಿಂದ ನೂತನ ಸಂಸತ್‌ ಭವನದಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಒಂದೆರಡು ದಿನಗಳಲ್ಲಿಯೇ ಮುಂಗಾರು ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ. ಜುಲೈ 17 ಅಥವಾ ಜುಲೈ 20ರಂದು ಆರಂಭವಾಗುವ ಸಂಸತ್‌ ಮುಂಗಾರು ಅಧಿವೇಶನವು ಆಗಸ್ಟ್‌ 10ರಂದು ಕೊನೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರವು ಹಲವು ವಿಧೇಯಕಗಳನ್ನು ಮಂಡಿಸಲು ಸಿದ್ಧವಾಗಿದೆ. ಇನ್ನು ಪ್ರತಿಪಕ್ಷಗಳು ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗುತ್ತಿವೆ. ಅದರಲ್ಲೂ, ಮಣಿಪುರ ಹಿಂಸಾಚಾರ, ಬೆಲೆಯೇರಿಕೆ ಸೇರಿ ಹಲವು ವಿಷಯಗಳು ಪ್ರತಿಪಕ್ಷಗಳ ಅಸ್ತ್ರಗಳಾಗಿವೆ.

ಕಳೆದ ತಿಂಗಳು ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನಕ್ಕೆ ಚಾಲನೆ ನೀಡಿದ್ದಾರೆ. ಹೊಸ ಕಟ್ಟಡ ಸಂಕೀರ್ಣದಲ್ಲಿರುವ ಶಾಸಕಾಂಗ ಸಭೆಗಳು ಭವ್ಯವಾಗಿವೆ. ಲೋಕಸಭೆಯು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಆಕೃತಿಯಲ್ಲಿದೆ. ಇಲ್ಲಿ ಪ್ರಸ್ತುತಕ್ಕಿಂತ ಮೂರು ಪಟ್ಟು ಆಸನ ಸಾಮರ್ಥ್ಯವಿದೆ. 888 ಸೀಟುಗಳಿವೆ. ರಾಜ್ಯಸಭೆಯ ವಿನ್ಯಾಸ ರಾಷ್ಟ್ರೀಯ ಹೂವು ಕಮಲದ ಆಕೃತಿಯಲ್ಲಿದ್ದು, 348 ಆಸನಗಳು ಇರುತ್ತವೆ. ಲೋಕಸಭೆಯ ಸಭಾಂಗಣವು ಜಂಟಿ ಅಧಿವೇಶನಗಳಿಗೆ ಅನುಕೂಲವಾಗುವಂತೆ 1,272 ಆಸನಗಳಿಗೆ ಅವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ: New Parliament Building: ಪ್ರಜಾಪ್ರಭುತ್ವದ ನವ ಶಕ್ತಿ ಕೇಂದ್ರ, ವೈವಿಧ್ಯದ ಆಗರ ನೂತನ ಸಂಸತ್‌ ಭವನ

ಹೊಸ ಸಂಕೀರ್ಣವು “ಪ್ಲಾಟಿನಂ-ರೇಟೆಡ್ ಹಸಿರು ಕಟ್ಟಡ”. ಇದು “ಸುಸ್ಥಿರ ಅಭಿವೃದ್ಧಿಯ ಕಡೆಗೆ ಭಾರತದ ಬದ್ಧತೆʼʼ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅನೇಕ ಪ್ರಾದೇಶಿಕ ಕಲಾಕೃತಿಗಳೂ ಇಲ್ಲಿ ಇರುತ್ತವೆ. ಹೊಸ ಸಂಕೀರ್ಣವನ್ನು ವಿಶೇಷ ಚೇತನರು ಓಡಾಡಲು ಕಷ್ಟವಾಗದಂತೆ ವಿನ್ಯಾಸಗೊಳಿಸಲಾಗಿದೆ. ಮಧ್ಯದಲ್ಲಿ ತೆರೆದ ಅಂಗಣಕ್ಕೆ ಪೂರಕವಾಗಿ ಕೇಂದ್ರದಲ್ಲಿ ವಿಶ್ರಾಂತಿ ಕೋಣೆಯನ್ನು ಹೊಂದಿದೆ. ಇಲ್ಲಿ ಸಂಸತ್‌ ಸದಸ್ಯರು ಇತರರ ಜತೆಗೆ ಸಂವಹನ ನಡೆಸಬಹುದು. ಈ ತೆರೆದ ಅಂಗಣದಲ್ಲಿ ರಾಷ್ಟ್ರೀಯ ಮರವಾದ ಆಲದ ಮರ ಕೂಡ ಇದೆ.

Exit mobile version