Site icon Vistara News

ಯಮಸ್ವರೂಪಿ ಫ್ರಿಡ್ಜ್‌ ಕಾಂಪ್ರೆಸ್ಸರ್‌ ಸ್ಫೋಟ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಸಾವು

Refrigerator compressor explode

Five members of family killed after refrigerator compressor exploded in Punjab

ಚಂಡೀಗಢ: ಬೇಸಿಗೆಯಲ್ಲಿ ತಣ್ಣನೆಯ ನೀರು ಕುಡಿಯಬೇಕು, ತರಕಾರಿ ಹಾಳಾಗದಂತೆ ಕಾಪಾಡಬೇಕು ಎಂಬುದು ಸೇರಿ ಹಲವು ‘ನೆಮ್ಮದಿ’ಯ ಕಾರಣಗಳಿಗಾಗಿ ಮನೆಗೊಂದು ಫ್ರಿಡ್ಜ್‌ ಖರೀದಿಸುತ್ತೇವೆ. ಆದರೆ, ಪಂಜಾಬ್‌ನ ಜಲಂಧರ್‌ನಲ್ಲಿರುವ ಮನೆಯೊಂದರಲ್ಲಿ ಫ್ರಿಡ್ಜ್‌ ‘ನೆಮ್ಮದಿ’ಯ ಜತೆಗೆ ಐವರ ಪ್ರಾಣವನ್ನೇ ಕಸಿದಿದೆ. ಹೌದು, ಜಲಂಧರ್‌ನಲ್ಲಿ ಭಾನುವಾರ ರಾತ್ರಿ (ಅಕ್ಟೋಬರ್‌ 8) ಫ್ರಿಡ್ಜ್‌ ಕಾಂಪ್ರೆಸ್ಸರ್‌ ಸ್ಫೋಟಗೊಂಡು (Fridge Compressor Exploded) ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಜಲಂಧರ್‌ನ ಅವತಾರ್‌ ನಗರದಲ್ಲಿ ರಾತ್ರಿ ಕಾಂಪ್ರೆಸ್ಸರ್‌ ಸ್ಫೋಟಗೊಂಡಿದೆ. ಐವರನ್ನೂ ಕೂಡಲೇ ಸಿವಿಲ್‌ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಐವರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಮೃತರನ್ನು ಯಶಪಾಲ್‌ ಘೈ (70), ರುಚಿ ಘೈ (40), ಮಾನ್ಶಾ (14), ದಿಯಾ (12) ಹಾಗೂ ಅಕ್ಷಯ್‌ (10) ಎಂಬುದಾಗಿ ಗುರುತಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿದ್ದು, ಕಾಂಪ್ರೆಸ್ಸರ್‌ ಸ್ಫೋಟಕ್ಕೆ ಕಾರಣ ಏನು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

“ಜಲಂಧರ್‌ನ ಅವತಾರ್‌ ನಗರದಲ್ಲಿ ಸ್ಫೋಟವೊಂದು ಸಂಭವಿಸಿದೆ ಎಂಬುದಾಗಿ ನಮಗೆ ಮಾಹಿತಿ ಸಿಕ್ಕಿತು. ಕೂಡಲೇ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆವು. ಗಂಭೀರವಾಗಿ ಗಾಯಗೊಂಡಿದ್ದ ಐವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಒಬ್ಬರೂ ಬದುಕುಳಿಯಲಿಲ್ಲ. ಸ್ಫೋಟಕ್ಕೆ ನಿಜವಾದ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಜಲಂಧರ್‌ ಎಡಿಸಿಪಿ ಆದಿತ್ಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru Cylinder Blast: ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಮಕ್ಕಳು ಸೇರಿ 10 ಜನರಿಗೆ ಗಂಭೀರ ಗಾಯ

“ಫ್ರಿಡ್ಜ್‌ನಲ್ಲಿರುವ ಕಾಂಪ್ರೆಸ್ಸರ್‌ ಸ್ಫೋಟಗೊಂಡಿದೆ. ಇದಾದ ಬಳಿಕ ಅದರ ಗ್ಯಾಸ್‌ ಸೋರಿಕೆಯಾಗಿದೆ. ನಂತರ ಬೆಂಕಿ ಹೊತ್ತಿಕೊಂಡಿದೆ. ಮನೆತುಂಬ ಗ್ಯಾಸ್‌ ಹರಡಿದ ಕಾರಣ ಉಸಿರುಗಟ್ಟಿ ಐವರೂ ಮೃತಪಟ್ಟಿದ್ದಾರೆ” ಎಂದು ತನಿಖಾಧಿಕಾರಿ ಹರದೇವ್‌ ಸಿಂಗ್‌ ತಿಳಿಸಿದ್ದಾರೆ. ಆದರೆ, ಪ್ರಕರಣದ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Exit mobile version