ಚೆನ್ನೈ: ತಮಿಳುನಾಡಿನ ಮೂವರಸನ್‌ಪೇಟ್‌ನಲ್ಲಿರುವ ಧರ್ಮಲಿಂಗೇಶ್ವರ ದೇವಾಲಯದ ಕೆರೆಯಲ್ಲಿ ಮುಳುಗಿ ಐವರು ಅರ್ಚಕರು (Priests Drown In Lake) ಮೃತಪಟ್ಟಿದ್ದಾರೆ. ಸುಮಾರು 25 ಅರ್ಚಕರು ಕೆರೆಯಲ್ಲಿ ನಟರಾಜರ್ ತೀರ್ಥಾವರಿ ಧಾರ್ಮಿಕ ವಿಧಿವಿಧಾನ ನೆರವೇರಿಸುವಾಗ ಕಾಲು ಜಾರಿ ಬಿದ್ದು ಐವರು ಅರ್ಚಕರು ಸಾವಿಗೀಡಾಗಿದ್ದಾರೆ. ಮಾರ್ಚ್ 26ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತೀರ್ಥಾವರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಮೂರ್ತಿಯನ್ನು ಎತ್ತಿಕೊಂಡು ಅರ್ಚಕರು ಹೋಗುತ್ತಿದ್ದರು. ಇದೇ ವೇಳೆ ಮುಂದೆ ಇದ್ದ ಇಬ್ಬರು ಅರ್ಚಕರು ನೀರಿನಲ್ಲಿ ಮುಳುಗಿದ್ದಾರೆ. ಇವರು ವಾಪಸ್ ಬರದ ಕಾರಣ, ಇವರನ್ನು ರಕ್ಷಿಸಲು ಮತ್ತೆ ಮೂವರು ಅರ್ಚಕರು ನೀರಿಗೆ ಮುಳುಗಿದ್ದಾರೆ. ಕೆರೆಯು ಸುಮಾರು 20 ಅಡಿ ಇದ್ದ ಕಾರಣ ನೀರಿನಲ್ಲಿ ಮುಳುಗಿದ ಐವರೂ ಅರ್ಚಕರು ಮೃತಪಟ್ಟಿದ್ದಾರೆ.
ಮೃತ ಅರ್ಚಕರನ್ನು ನಂಗಾನಲ್ಲೂರಿನ ಸೂರ್ಯ (24), ಮಡಿಪಕ್ಕಮ್‌ನ ರಾಘವನ್ (22), ಕೀಲ್‌ಕಟಲಾಯಿಯ ಯೋಗೇಶ್ವರನ್ (23), ನಂಗಾನಲ್ಲೂರಿನ ವನೇಶ್ (20) ಹಾಗೂ ಇದೇ ಊರಿನ ರಾಘವನ್ (18) ಎಂದು ಗುರುತಿಸಲಾಗಿದೆ. ಐವರೂ ಅರ್ಚಕರ ಶವಗಳನ್ನು ಹೊರತೆಗೆಯಲಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕರ್ನಾಟಕದಲ್ಲಿ ಕೂಡ ಮಾರ್ಚ್ 4ರಂದು ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದರು. ಈಜಾಡಲು ಹೋಗಿದ್ದ ಇಬ್ಬರು ಕುರಿಗಾಹಿ ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಕೆರೆಯಲ್ಲಿ ನಡೆದಿದೆ. ಅಲೂರು ಗ್ರಾಮದ ರಾಜು (19), ಚಿಕ್ಕಮಲ್ಲನಹೊಳೆ ಗ್ರಾಮದ ವಿಜಯ್ (19) ಮೃತ ಯುವಕರು. ಬೇಸಿಗೆ ರಜೆ ಇದ್ದ ಕಾರಣ ಕುರಿ ಮೇಯಿಸಲು ಕೆರೆಯ ಬಳಿ ಬಂದಿದ್ದ ಯುವಕರು, ಬಿಸಿಲು ಜಾಸ್ತಿ ಇದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿದ್ದರು.
ಈ ವೇಳೆ ಚೆನ್ನಾಗಿಯೇ ಈಜಾಡುತ್ತಿದ್ದ ರಾಜು ಸುಸ್ತಾಗಿ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ. ಹೀಗಾಗಿ ಆತ ರಕ್ಷಣೆಗೆ ಕೂಗಿಕೊಂಡಿದ್ದಾನೆ. ಸ್ನೇಹಿತನಿಗೆ ತೊಂದರೆಯಾಗಿರುವುದನ್ನು ಗಮನಿಸಿದ ವಿಜಯ್ ಆತನನ್ನು ಕಾಪಾಡುವ ಸಂಬಂಧ ಸಮೀಪ ಹೋಗಿದ್ದಾನೆ. ಆದರೆ, ಈ ವೇಳೆ ಆತನಿಂದ ರಾಜುವಿನ ರಕ್ಷಣೆ ಸಾಧ್ಯವಾಗಲಿಲ್ಲ. ಮೊದಲೇ ಭಯದಲ್ಲಿದ್ದ ರಾಜು, ರಕ್ಷಿಸಲು ಬಂದಿದ್ದ ವಿಜಯ್‌ನನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರಿಂದ ಆತನಿಗೂ ತಪ್ಪಿಸಿಕೊಂಡು ಬರಲಾಗದೆ, ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಇಬ್ಬರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೊನ್ನಾವರದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ; ಚಿತ್ರದುರ್ಗದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು