Site icon Vistara News

Pulwama Attack | ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಬೆಂಗಳೂರು ಸ್ಟೂಡೆಂಟ್‌ಗೆ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ.ದಂಡ!

PULWAMA

ಬೆಂಗಳೂರು: 2019ರಲ್ಲಿ ಸಂಭವಿಸಿದ ಪುಲ್ವಾಮಾ ಆತ್ಮಹತ್ಯಾ ಬಾಂಬ್ ಸ್ಫೋಟವನ್ನು (Pulwama Attack) ಫೇಸ್‌ಬುಕ್‌ನಲ್ಲಿ ಸಂಭ್ರಮಿಸಿದ್ದ ಬೆಂಗಳೂರಿನ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಎನ್ಐಎ ವಿಶೇಷ ಕೋರ್ಟ್ ದೋಷಿ ಎಂದು ಪರಿಗಣಿಸಿ, 5 ವರ್ಷ ಸಾದಾ ಶಿಕ್ಷೆ ಮತ್ತು 25,000 ರೂ. ದಂಡವನ್ನು ವಿಧಿಸಿದೆ.

ಒಂದೊಮ್ಮೆ ಈ ಶಿಕ್ಷೆಯನ್ನು ಯಾವುದೇ ರೀತಿಯಲ್ಲಾದರೂ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿಯಾಗಿ ಮತ್ತೆ 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುಬೇಕಾಗುತ್ತದೆ ಎಂದು ಎನ್ಐಎನ ವಿಶೇಷ ನ್ಯಾಯಾಲಯದ ಜಡ್ಜ್ ಸಿ ಎಂ ಗಂಗಾಧರ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಯುಎಪಿಎ ಕಾಯ್ದೆಯಡಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿ ಹೆಸರು ಫಯಾಜ್ ರಶೀದ್.

2019 ಫೆಬ್ರವರಿ 14ರಂದು ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ವಾಹನಗಳ ಸಾಲಿನಲ್ಲಿ ಸ್ಫೋಟಿಸಿದ್ದರು. ಈ ಘಟನೆಯಲ್ಲಿ 40ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದರು. ಪುಲ್ವಾಮ ಘಟನೆಯಾದ ಬಳಿಕ ಮೂರು ದಿನಗಳ ಬಳಿಕ ಬೆಂಗಳೂರು ಪೊಲೀಸರು, ಈಗ ಶಿಕ್ಷೆಗೆ ಗುರಿಯಾಗಿರುವ ವಿದ್ಯಾರ್ಥಿಯನ್ನು ಬಂಧಿಸಿದ್ದರು. ಪುಲ್ವಾಮಾ ಘಟನೆಗೆ ಫೇಸ್‌ಬುಕ್‌ನಲ್ಲಿ ಈ ಆರೋಪಿ ಸಂಭ್ರಮ ವ್ಯಕ್ತಪಡಿಸಿದ್ದ ಎಂಬ ಆರೋಪವನ್ನು ಹೊರಿಸಲಾಗಿತ್ತು.

ಇದನ್ನೂ ಓದಿ | ಪುಲ್ವಾಮಾದಲ್ಲಿ ಉಗ್ರರ ಗುಂಡಿಗೆ ಪೊಲೀಸ್‌ ಅಧಿಕಾರಿ ಬಲಿ; ರಾತ್ರಿ ಹೊಲದಲ್ಲಿ ನಡೆಯಿತು ದಾಳಿ

Exit mobile version