ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡಲು ಹತ್ತಾರು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರ ಆಸ್ತಿ ಮುಟ್ಟುಗೋಲು ಸೇರಿ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಕೆಲ ದಿನಗಳ ಹಿಂದಷ್ಟೇ ಹತ್ಯೆಗೀಡಾದ ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್‌ನಿಂದ (Atiq Ahmed) ವಶಪಡಿಸಿಕೊಂಡ ಜಾಗದಲ್ಲಿ ಯೋಗಿ ಆದಿತ್ಯನಾಥ್ ಅವರು ಬಡವರಿಗಾಗಿ ಮನೆ ನಿರ್ಮಿಸಿದ್ದಾರೆ.
ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನಿಂದ ಪ್ರಯಾಗರಾಜ್‌ನಲ್ಲಿ ಜಾಗ ವಶಪಡಿಸಿಕೊಳ್ಳಲಾಗಿದ್ದು, ಇದೇ ಜಾಗದಲ್ಲಿ ಈಗ 76 ಮನೆಗಳುಳ್ಳ ಫ್ಲ್ಯಾಟ್ ನಿರ್ಮಿಸಲಾಗಿದೆ. ಪ್ರಯಾಗರಾಜ್‌ನ ಲುಕರ್‌ಗಂಜ್‌ನಲ್ಲಿ 1,731 ಚದರ ಮೀಟರ್ ಜಾಗದಲ್ಲಿ, ಎರಡು ಬ್ಲಾಕ್ ಅಪಾರ್ಟ್‌ಮೆಂಟ್ ನಿರ್ಮಿಸಲಾಗಿದೆ. ಮನೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮನೆ ನಿರ್ಮಾಣ ಕಾಮಗಾರಿ
#WATCH | Prayagraj, Uttar Pradesh | Construction of flats for the poor, that are being built on the land confiscated from slain gangster-turned-politician Atiq Ahmed, set to complete soon. Upon completion, the residences will be handed over to the poor. pic.twitter.com/bZFLqhdxYl
— ANI UP/Uttarakhand (@ANINewsUP) June 8, 2023
2021ರ ಡಿಸೆಂಬರ್‌ನಲ್ಲಿ ಯೋಗಿ ಆದಿತ್ಯನಾಥ್ ಅವರು ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಜಿಲ್ಲಾ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲಾಗಿದೆ. ಬಡವರಿಗೆ ಕೈಗೆಟಕುವ ದರದಲ್ಲಿ ಫ್ಲ್ಯಾಟ್‌ಗಳನ್ನು ನೀಡಲಾಗುತ್ತದೆ. ಗ್ಯಾಂಗ್‌ಸ್ಟರ್‌ಗಳಿಂದ ವಶಪಡಿಸಿಕೊಂಡ ಜಾಗದಲ್ಲಿ ಬಡವರಿಗೆ ಮನೆ ನಿರ್ಮಿಸಿ ಕೊಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ಯಾಂಗ್‌ಸ್ಟರ್ ಜತೆಗೆ ರಾಜಕಾರಣಿಯೂ ಆಗಿದ್ದ ಅತೀಕ್ ಅಹ್ಮದ್ ಹಲವರ ಆಸ್ತಿ ಕಬಳಿಸಿದ್ದ. ಹಾಗಾಗಿ, ಆತನ ಅಕ್ರಮ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ.
ಇದನ್ನೂ ಓದಿ: Atiq Ahmed: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಂಬಂಧಿಯ ಆಸ್ತಿ ಕಬಳಿಸಿದ್ದ ಡಾನ್ ಅತೀಕ್ ಅಹ್ಮದ್!
ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜುಪಾಲ್ ಹತ್ಯೆ ಮತ್ತು ಅವರ ಕೊಲೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿದ್ದ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ವಿರುದ್ಧ ಇನ್ನೂ ಹಲವು ಕೇಸ್ಗಳು ಇದ್ದು, ಪ್ರಯಾಗ್ರಾಜ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಅವರಿಬ್ಬರನ್ನೂ ಗುಜರಾತ್ನ ಸಬರಮತಿ ಜೈಲಿನಲ್ಲಿ ಇಟ್ಟು, ವಿಚಾರಣೆಗಾಗಿ ಇಲ್ಲಿ ಕರೆದುಕೊಂಡು ಬಂದು, ಮುಗಿಯುತ್ತಿದ್ದಂತೆ ಮತ್ತೆ ಗುಜರಾತ್ಗೆ ಕರೆದೊಯ್ಯಲಾಗುತ್ತಿತ್ತು. ಏಪ್ರಿಲ್ 15ರಂದು ಕೂಡ ಅವರಿಬ್ಬರ ವಿಚಾರಣೆ ಕೋರ್ಟ್ನಲ್ಲಿ ಮುಗಿದಿತ್ತು. ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗಲೇ ಹತ್ಯೆಯಾಗಿದೆ. ಶೂಟರ್ಗಳಾದ ಲೋವ್ಲೇಶ್, ಸನ್ನಿ ಮತ್ತು ಅರುಣ್ನನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.