ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ(Sick Leave) ಹಾಕಿರುವ ಹಿನ್ನೆಲೆ ಸುಮಾರು 86 ಎಕ್ಸ್‌ಪ್ರೆಸ್ ವಿಮಾನಗಳು ರದ್ದಾಗಿವೆ. ಸುಮಾರು 300ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ಕ್ಯಾನ್ಸಲ್(Flights cancelled) ಆಗಿದೆ. ಇನ್ನು ಸಾಮೂಹಿಕ ರಜೆ ಮೇಲೆ ಹೋಗಿರುವ ಸಿಬ್ಬಂದಿ ತಮ್ಮ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಿಮಾನ ರದ್ದತಿಗೆ ಪ್ರತಿಕ್ರಿಯೆಯಾಗಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಈ ವಿಷಯವನ್ನು ಪ್ರಸ್ತಾಪಿಸಿ, “ನಮ್ಮ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿದೆ ಎಂದು ವರದಿ ಮಾಡಿದೆ, ಇದು ಕಳೆದ ರಾತ್ರಿಯಿಂದ ಪ್ರಾರಂಭವಾಯಿತು, ಇದರ ಪರಿಣಾಮವಾಗಿ ವಿಮಾನ ವಿಳಂಬ ಮತ್ತು ರದ್ದತಿ ಸಂಭವಿಸಿದೆ” ಎಂದು ಹೇಳಿದರು. ಹಠಾತ್ ಗೈರುಹಾಜರಿಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಮಾನಯಾನವು ಆ ಸಿಬ್ಬಂದಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವಕ್ತಾರರು ಭರವಸೆ ನೀಡಿದರು
ನಾವು ನಮ್ಮ ಪ್ರಯಾಣಿಕರಲ್ಲಿ ಅಡಚಣೆಗಾಗಿ ಕ್ಷಮೆಯಾಚಿಸುತ್ತಿದ್ದೇವೆ. ಸೇವೆ ಮೇಲ ಇದು ಪರಿಣಾಮ ಬೀರದಂತೆ ತಡೆಯಲು ನಾವು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ವಿಮಾನ ಕ್ಯಾನ್ಸಲ್ ಆಗಿರುವುದರಿಂದ ಟಿಕೆಟ್ ದರವನ್ನು ಪ್ರಯಾಣಿಕರಗೆ ಹಿಂದಿರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅನೇಕ ಪ್ರಯಾಣಿಕರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಸೂಚನೆ, ಮಾಹಿತಿ ನೀಡದೇಯೇ ಏರ್ ಇಂಡಿಯಾ ವಿಮಾನಗಳ ಹಾರಾಟ ಕ್ಯಾನ್ಸಲ್ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Up to 300 Air India Express (AIX) crew reported sick for work : Around 78 Air India Express flights cancelled on domestic, international routes owing to mass sick leave.
— FL360aero (@fl360aero) May 8, 2024
Air India Express : "A section of cabin crew has reported sick at the last minute, starting last night, Teams… pic.twitter.com/numDb58nbV
ಪ್ರತಿಭಟನೆಗೆ ಕಾರಣವೇನು?
ಟಾಟಾ ಗ್ರೂಪ್ ಜೊತೆಗೆ ಏರ್ ಇಂಡಿಯಾ ವಿಲೀನಗೊಂಡ ಬಳಿಕ ಸಿಬ್ಬಂದಿ ನಡುವೆ ತಾರತಮ್ಯ ಸಮಸ್ಯೆ ಉಂಟಾಗಿತ್ತು. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೆಲವೊಂದು ಸಿಬ್ಬಂದಿಗೆ ಕೆಲದರ್ಜೆಯ ನೌಕರಿಯನ್ನು ನೀಡಲಾಗುತ್ತಿದೆ. ಪರಿಹಾರ ಪ್ಯಾಕೇಜ್‌ನ ಪ್ರಮುಖ ಭಾಗಗಳನ್ನು ಮಾರ್ಪಡಿಸಲಾಗಿದೆ ಅಥವಾ ತೆಗೆದುಹಾಕಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬಲವಂತವಾಗಿ ಬಾಯಿಮುಚ್ಚಿಸಲಾಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಇದನ್ನೂ ಓದಿ:Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್ ಸಲಹೆ
ವಿಮಾನಯಾನ ಸಂಸ್ಥೆಯು ಪ್ರಸ್ತುತ ಎಐಎಕ್ಸ್ ಕನೆಕ್ಟ್ (ಹಿಂದಿನ ಏರ್ ಏಷ್ಯಾ ಇಂಡಿಯಾ) ಅನ್ನು ತನ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿದೆ. ಪೈಲಟ್ ಸಮಸ್ಯೆಗಳಿಂದಾಗಿ ಟಾಟಾ ಗ್ರೂಪ್ ಪೂರ್ಣ-ಸೇವಾ ವಾಹಕ ವಿಸ್ತಾರಾ ರದ್ದಾಗಿರುವ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಈ ಬಿಕ್ಕಟ್ಟು ಶುರುವಾಗಿದೆ. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಬಗ್ಗೆ ವಿಸ್ತಾರಾದಲ್ಲಿದ್ದ ಪೈಲಟ್‌ಗಳಲ್ಲೂ ಅಸಮಾಧಾನವು ಭುಗಿಲೆದ್ದಿತ್ತು. ಹೊಸ ಒಪ್ಪಂದಗಳನ್ನು ಅನುಸರಿಸಿ, ಪೈಲಟ್‌ಗಳು ವಿಮಾನಗಳನ್ನು ನಿರ್ವಹಿಸುವ ರೋಸ್ಟರ್‌ಗಳು ಮತ್ತು ಅವರ ವೇತನ ಪ್ಯಾಕೇಜ್‌ಗಳ ಅಂಶಗಳ ಬಗ್ಗೆ ಕಳವಳಗಳಿವೆ. ಈ ಎಲ್ಲಾ ಕಾರಣಗಳಿಂದ ಇದೀಗ ಏರ್ ಇಂಡಿಯಾ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.