Site icon Vistara News

ವಿಮಾನ ವಿಳಂಬ ಸಮಸ್ಯೆ! ಬೆಂಗಳೂರು ಸೇರಿ 6 ಮೆಟ್ರೋ ಏರ್‌ಪೋರ್ಟ್‌ಗಳಲ್ಲಿ ವಾರ್ ರೂಮ್ಸ್ ಸ್ಥಾಪನೆ

Flight delay problem, war rooms will set up in 6 metro Airports

ನವದೆಹಲಿ: ದಟ್ಟ ಮಂಜಿನಿಂದ ವಿಮಾನಯಾನ ಪ್ರಯಾಣಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ(Flight delay problem). ಪ್ರಯಾಣಿಕರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವುದಕ್ಕಾಗಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ (Aviation Minister Jyotiraditya Scindia) ಅವರು, ಬೆಂಗಳೂರು (Bengaluru) ಸೇರಿದಂತೆ ಆರು ಮೆಟ್ರೋ ವಿಮಾನ ನಿಲ್ದಾಣಗಳಲ್ಲಿ ವಾರ್ ರೂಮ್ಸ್ (War Rooms at Airports) ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.

ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ನೀಡಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರು, ದೇಶೀಯ ಮತ್ತು ಅಂತರಾಷ್ಟ್ರೀಯ ವಾಣಿಜ್ಯ ವಿಮಾನ ಕಾರ್ಯಾಚರಣೆಗಳಿಗೆ ದಟ್ಟ ಮಂಜು ಸಾಕಷ್ಟು ಅಡ್ಡಿಯಾಗುತ್ತಿದೆ. ನೂರಾರು ವಿಮಾನಗಳ ವಿಳಂಬ ಅಥವಾ ರದ್ದತಿಗೆ ಕಾರಣವಾಗಿದೆ. ಹಾಗಾಗಿ, ಪ್ರಯಾಣಿಕರ ಅನಾನುಕೂಲತೆಯನ್ನು ತಗ್ಗಿಸಲು ಏರ್‌ಲೈನ್‌ಗಳಿಗೆ ನೀಡಲಾದ ಹೊಸ ಎಸ್‌ಒಪಿಗಳು ಅಥವಾ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ವಿವರಿಸಿದ್ದಾರೆ.

ಡಿಜಿಸಿಎ ವರದಿಗಳ ಜಾರಿ ಸೇರಿದಂತೆ ಆರು ಮೆಟ್ರೋಗಳ ವಿಮಾನನಿಲ್ದಾಣಗಳ ದೈನಂದಿನ ವರದಿಗಳನ್ನು ಕೇಂದ್ರ ಸರ್ಕಾರವು ತರಿಸಿಕೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ತಮ್ಮ ಎಕ್ಸ್ ವೇದಿಕೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕರ ಅನಾನುಕೂಲತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ವಿಮಾನ ನಿಲ್ದಾಣಗಳು ಮತ್ತು ಏರ್‌ಲೈನ್ ನಿರ್ವಾಹಕರು ಎಲ್ಲಾ ಆರು ಮೆಟ್ರೋಗಳಲ್ಲಿ ‘ವಾರ್ ರೂಮ್’ಗಳನ್ನು ಸ್ಥಾಪಿಸುತ್ತಾರೆ. ಸಾಕಷ್ಟು ಸಿಐಎಸ್ಎಫ್ ದಿನದ 24 ಗಂಟೆಯೂ ನಿಗಾವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ 29ಎಲ್ ಸಿಎಟಿ ಐಐಟಿ ಸ್ಟೇಟಸ್ ಹೊಂದಿದ್ದು, ಶೀಘ್ರವೇ ಕಾರ್ಯಗತಗೊಳಿಸಲಾಗುವುದು. ಈ ರನ್‌ವೇಯಲ್ಲಿ ದಟ್ಟವಾದ ಮಂಜಿನ ಸನ್ನಿವೇಶಗಳಲ್ಲಿಯೂ ಸಹ ಟೇಕ್-ಆಫ್ ಮತ್ತು ನಿರ್ಗಮನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಸಚಿವರು ತಿಳಿಸಿದ್ದಾರೆ.

ವಿಮಾನ ಹಾರಾಟ ವಿಳಂಬ ಎಂದು ಪೈಲಟ್‌ಗೆ ಹೊಡೆದ ಪ್ರಯಾಣಿಕ

ಭಾರಿ ಮಳೆ, ಚಂಡಮಾರುತ ಸೇರಿ ಯಾವುದೇ ರೀತಿಯಲ್ಲಿ ಹವಾಮಾನ ವೈಪರೀತ್ಯ ಉಂಟಾದರೆ ವಿಮಾನಗಳ ಹಾರಾಟ ವಿಳಂಬವಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಪೇಚಾಡುವುದು ಕೂಡ ಅಷ್ಟೇ ಸಾಮಾನ್ಯ. ಹೀಗೆ, ಭಾನುವಾರ (ಜನವರಿ 14) ದಟ್ಟ ಮಂಜಿನಿಂದಾಗಿ ವಿಮಾನದ ಹಾರಾಟ ವಿಳಂಬವಾಗಿಯಿತು ಎಂದು ಇಂಡಿಗೋ ವಿಮಾನದ (IndiGo Flight) ಪ್ರಯಾಣಿಕನೊಬ್ಬ ಪೈಲಟ್‌ (Pilot) ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾನುವಾರ ಬೆಳಗಿನ ಜಾವ ಇಂಡಿಗೋ ವಿಮಾನವು ದೆಹಲಿಯಿಂದ ಗೋವಾಗೆ ಹೊರಡಬೇಕಿತ್ತು. ಆದರೆ, ದೆಹಲಿಯಲ್ಲಿ ದಟ್ಟ ಮಂಜು ಕವಿದ ಕಾರಣ ವಿಮಾನದ ಹಾರಾಟ ವಿಳಂಬವಾಗಿದೆ. ಸುಮಾರು 13 ತಾಸು ಪ್ರಯಾಣಿಕರು ವಿಮಾನದಲ್ಲಿಯೇ ಕಾದು ಕುಳಿತಿದಿದ್ದಾರೆ. ಇದೇ ವೇಳೆ ವಿಮಾನದ ಪೈಲಟ್‌ ಎಲ್ಲ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿಮಾನ ಹಾರಾಟ ವಿಳಂಬವಾಗಿರುವ ಕುರಿತು ಹೇಳುತ್ತಿದ್ದರು. ಆದರೆ, ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪೈಲಟ್‌ ಮೇಲೆ ಎರಗಿ, ಪೈಲಟ್‌ಗೆ ಹಲ್ಲೆ ನಡೆಸಿದ್ದಾನೆ. “ವಿಮಾನ ಹಾರಿಸಿದರೆ ಹಾರಿಸು, ಇಲ್ಲ ಸುಮ್ಮನಿರು” ಎಂದು ವ್ಯಕ್ತಿಯು ಗದರಿದ್ದಾನೆ.

ವಿಮಾನ ಪ್ರಯಾಣಿಕನು ಪೈಲಟ್‌ ಮೇಲೆಯೇ ಹಲ್ಲೆ ನಡೆಸಿದ ಕೂಡಲೇ ವಿಮಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. “ಇದೇನು ಮಾಡುತ್ತಿದ್ದೀರಿ” ಎಂದು ಗಗನಸಖಿಯು ಪ್ರಯಾಣಿಕನ ಮೇಲೆ ಗದರಿದ್ದಾರೆ. ಇಷ್ಟಾದರೂ ಪ್ರಯಾಣಿಕನು ಪೈಲಟ್‌ಗೆ ಬೈದಿದ್ದಾನೆ. ಒಂದಷ್ಟು ಸಿಬ್ಬಂದಿಯು ವ್ಯಕ್ತಿಯನ್ನು ಸಮಾಧಾನಪಡಿಸಿ ಕೂರಿಸಿದ್ದಾರೆ. ಇದಾದ ಬಳಿಕ ಇಂಡಿಗೋ ವಿಮಾನಯಾನ ಸಂಸ್ಥೆಯು ದೂರು ದಾಖಲಿಸಿದ್ದು, ಹಲ್ಲೆ ನಡೆಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಹಲ್ಲೆ ಮಾಡಿದ ಪ್ರಯಾಣಿಕನನ್ನು ಸಾಹಿಲ್‌ ಕಟಾರಿಯಾ ಎಂದು ಗುರುತಿಸಲಾಗಿದೆ. ಈತನು ಅನೂಪ್‌ ಕುಮಾರ್‌ ಎಂಬ ಪೈಲಟ್‌ ಮೇಲೆ ಹಲ್ಲೆ ನಡೆಸಿದ್ದಾನೆ.

ವಿಮಾನದ ಪೈಲಟ್‌ ಸೇರಿ ಯಾವುದೇ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ನಮ್ಮ ಸಂಸ್ಥೆಯು ಖಂಡಿಸುತ್ತದೆ. ಹಾಗಾಗಿ, ಪೈಲಟ್‌ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣದ ಮೂಲಕ ದೆಹಲಿ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಾದ ಬಳಿಕ ಆರೋಪಿಯು ಕ್ಷಮೆಯಾಚಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೂ, ವಿಮಾನಯಾನ ಸಂಸ್ಥೆಯು ಈತನನ್ನು ನೋ ಫ್ಲೈ (ಹಾರಾಟಕ್ಕೆ ಅನುಮತಿ ಇಲ್ಲದವರ ಪಟ್ಟಿ) ಲಿಸ್ಟ್‌ಗೆ ಸೇರಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಅಲ್ಲದೆ, ಸೋಮವಾರವೂ ದೆಹಲಿಯಲ್ಲಿ ದಟ್ಟ ಮಂಜು ಕವಿದ ಕಾರಣ 40ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ. ಇನ್ನೂ ಕೆಲವು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ

Exit mobile version