Site icon Vistara News

Flight Emergency Landing: ತಪ್ಪಿದ ಮತ್ತೊಂದು ಭಾರೀ ಅವಘಡ; ಸ್ಪೈಸ್‌ ಜೆಟ್‌ ವಿಮಾನ ತುರ್ತು ಭೂಸ್ಪರ್ಶ

Flight Emergency Landing

ನವದೆಹಲಿ: ಪಕ್ಷಿ ಡಿಕ್ಕಿ ಹೊಡೆದ ಕಾರಣ ಟೇಕ್‌ ಆಫ್‌ ಆಗಿದ್ದ ವಿಮಾನವೊಂದು ತುರ್ತು ಭೂಸ್ಪರ್ಶ(Flight Emergency Landing) ಮಾಡಿರುವ ಘಟನೆ ದೆಹಲಿ(New Delhi)ಯಲ್ಲಿ ನಡೆದಿದೆ. ದೆಹಲಿಯಿಂದ ಲೇಹ್‌ಗೆ ಹೊರಟಿದ್ದ SG123 ಸ್ಪೈಸ್‌ ಜೆಟ್‌(Spice jet) ವಿಮಾನ ಟೇಕ್‌ ಆಫ್‌(Take off) ಆಗುತ್ತಿದ್ದಂತೆ ಹಕ್ಕಿಯೊಂದು ಬಂದು ಎಂಜಿನ್‌ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಸಮಯಪ್ರಜ್ಞೆ ಮೆರೆದ ಪೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಬೆಳಗ್ಗೆ 10.29 ಕ್ಕೆ ಟೇಕ್‌ ಆಫ್‌ ಆಗಿದ್ದ ವಿಮಾನ 11ಗಂಟೆ ಹೊತ್ತಿಗೆ ಲ್ಯಾಂಡ್‌ ಆಗಿದೆ. ಇನ್ನು ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಂತಹದ್ದೇ ಒಂದು ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ದುಬೈಯಿಂದ ಮುಂಬೈ ಆಗಮಿಸಿದ ಎಮಿರೇಟ್ಸ್‌ ವಿಮಾನ (Emirates Flight)ಕ್ಕೆ ಸಿಲುಕಿ ಸುಮಾರು 36 ಫ್ಲೆಮಿಂಗೊ(Flamingos) ಪಕ್ಷಿಗಳು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿತ್ತು.

ಮುಂಬೈಯ ಘಾಟ್‌ಕೋಪರ್‌ನ ಪಂತ್‌ನಗರದ ಲಕ್ಷ್ಮೀ ನಗರ ಪ್ರದೇಶದಲ್ಲಿ ಕಳೆದ ಸೋಮವಾರ ರಾತ್ರಿ ಈ ಅವಘಡ ನಡೆದಿದೆ. ಸುಮಾರು 310 ಪ್ರಯಾಣಿಕರನ್ನು ಹೊತ್ತ ಇಕೆ 508 (EK 508) ಎಮಿರೇಟ್ಸ್‌ ವಿಮಾನ ರಾತ್ರಿ 9.18ರ ಸುಮಾರಿಗೆ ಮುಂಬೈಗೆ ಆಗಮಿಸಿತ್ತು. ಈ ವೇಳೆ ಕೊಕ್ಕರೆಯಂತಹ ಫ್ಲೆಮಿಂಗೊಗಳು ವಿಮಾನಕ್ಕೆ ಸಿಲುಕಿ ಸಾವನ್ನಪ್ಪಿವೆ ಎಂದು ಮೂಲಗಳು ತಿಳಿಸಿವೆ. ವಿಮಾನಕ್ಕೂ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಯಾವುದೇ ಅಪಾಯವಿಲ್ಲದೆ ಲ್ಯಾಂಡ್‌ ಆಗಿತ್ತು.

ಇದಕ್ಕೂ ಮುನ್ನ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ(Emergency Landing) ಮಾಡಿತ್ತು. ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ತುರ್ತು ಭೂ ಸ್ಪರ್ಶ ಮಾಡಲಾಗಿದ್ದು, ಭಾರೀ ಅವಘಡವೊಂದು ತಪ್ಪಿತ್ತು.

AI 1132 ಏರ್​ ಇಂಡಿಯಾ ವಿಮಾನ ರಾತ್ರಿ 11.20ಕ್ಕೆ ಬೆಂಗಳೂರಿನಿಂದ ಕೊಚ್ಚಿಗೆ ತೆರಳಲು ಟೇಕ್​​ ಆಫ್ ಆಗಿತ್ತು. ಆದರೆ ವಿಮಾನದಲ್ಲಿ ಏಕಾಏಕಿ ಬೆಂಕಿ ಹೊಗೆ ಕಾಣಿಸಿಕೊಂಡಿದೆ. ಕೂಡಲೆ ಪೈಲಟ್​​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಮರ್ಜೆನ್ಸಿ ಲ್ಯಾಂಡ್​ ಮಾಡಿದರು. ಇದರಿಂದ ಭಾರಿ ಅನಾಹುತ ತಪ್ಪಿದೆ. ವಿಮಾನ ಭೂ ಸ್ಪರ್ಶವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಬೆಂಕಿಯನ್ನು ನಂದಿಸಿದ್ದಾರೆ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ 170 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್‌ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ:Accident: ಭೀಕರ ಅಪಘಾತ; ದೇವಸ್ಥಾನಕ್ಕೆ ತೆರಳುತ್ತಿದ್ದ 11 ಜನ ಸ್ಥಳದಲ್ಲೇ ದುರ್ಮರಣ

ಮೇ 16ರಂದು ಕೂಡ ಇಂತಹದ್ದೇ ಒಂದು ಘಟನೆ ಪುಣೆಯಲ್ಲಿ ನಡೆದಿತ್ತು,. 180 ಪ್ರಯಾಣಿಕರೊಂದಿಗೆ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನವು ಪುಣೆ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಗುರುವಾರ (ಮೇ 16) ಟಗ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಿಂದಾಗಿ ವಿಮಾನಕ್ಕೆ ಹಾನಿಯಾಗಿದ್ದರೂ ಅದೃಷ್ಟವಶಾತ್‌ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ನಂತರ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು.

Exit mobile version