Site icon Vistara News

Floods In Assam: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ; 37ಕ್ಕೆ ಏರಿದ ಸಾವಿನ ಸಂಖ್ಯೆ

Floods In Assam

Floods In Assam

ದಿಸ್ಪುರ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಕಡೆ ಉಷ್ಣಮಾರುತವು (Heat wave) ಮಾರಣಾಂತಿಕವಾಗಿ ಪರಿಣಮಿಸಿದ್ದರೆ, ಅಸ್ಸಾಂನಲ್ಲಿ ರಣ ಭೀಕರ ಪ್ರವಾಹದಿಂದ (Floods In Assam) ಜನ ಜೀವನ ಅಸ್ತವ್ಯಸ್ತವಾಗಿದೆ. ಅಸ್ಸಾಂನಲ್ಲಿ ಒಟ್ಟಾರೆ ಪರಿಸ್ಥಿತಿ ಭೀಕರವಾಗಿದ್ದು, 3.90 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗುವುದರೊಂದಿಗೆ ಪ್ರವಾಹ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, 19 ಜಿಲ್ಲೆಗಳ ಪರಿಸ್ಥಿತಿ ಇನ್ನೂ ಹಾಗೆಯೇ ಇದೆ ಎಂದು ಅವರು ಹೇಳಿದ್ದಾರೆ.

ಸಾವಿನ ಸಂಖ್ಯೆ 37ಕ್ಕೆ ಏರಿಕೆ

ಈ ವರ್ಷದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37ಕ್ಕೆ ತಲುಪಿದೆ ಮತ್ತು ಓರ್ವ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಕಮ್ರೂಪ್, ತಮುಲ್ಪುರ್, ಹೈಲಕಂಡಿ, ಉದಲ್ಗುರಿ, ಹೊಜೈ, ಧುಬ್ರಿ, ಬಾರ್ಪೇಟಾ, ಬಿಸ್ವಾನಾಥ್, ನಲ್ಬಾರಿ, ಬೊಂಗೈಗಾಂವ್, ಬಕ್ಸಾ, ಕರೀಂಗಂಜ್, ದಕ್ಷಿಣ ಸಲ್ಮಾರಾ, ಗೋಲ್ಪಾರಾ, ದರ್ರಾಂಗ್, ಬಜಾಲಿ, ನಾಗಾನ್, ಕಚಾರ್ ಮತ್ತು ಕಮ್ರೂಪ್ ಜಿಲ್ಲೆಗಳಲ್ಲಿ ಒಟ್ಟು 3,90,491 ಮಂದಿ ಪ್ರವಾಹಕ್ಕೆ ಸಿಲುಕಿ ತೊಂದರೆಗೆ ಒಳಗಾಗಿದ್ದಾರೆ. ಕರೀಂಗಂಜ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 2.40 ಲಕ್ಷಕ್ಕೂ ಹೆಚ್ಚು ಜನರಿಗೆ ಜಲ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.

ರಾಜ್ಯದ ಪ್ರಮುಖ ನದಿಗಳಾದ ಕಂಪುರ್ ಮತ್ತು ಧರಮ್ತುಲ್‌ನ ಕೊಪಿಲಿ, ಬಿಪಿ ಘಾಟ್‌ನ ಬರಾಕ್ ಮತ್ತು ಕರೀಂಗಂಜ್‌ನ ಕುಶಿಯಾರಾ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. 15,000ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡುವ 100ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 125 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವಿವಿಧ ಜಿಲ್ಲೆಗಳಲ್ಲಿ ಮನೆಗಳು, ದನದ ಕೊಟ್ಟಿಗೆಗಳು, ರಸ್ತೆಗಳು, ಸೇತುವೆಗಳು, ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್ಪೇಟಾದ ಸರುಖೇತ್ರಿ ಪ್ರದೇಶದ ಬಳಿ ಗುರುವಾರ 10 ಪ್ರಯಾಣಿಕರನ್ನು ಹೊತ್ತ ದೋಣಿ ಮಗುಚಿ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. “ನಾಲ್ವರು ಅಪ್ರಾಪ್ತರು ಸೇರಿದಂತೆ ಇತರ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡವನ್ನು ನಿಯೋಜಿಸಲಾಗಿದೆ. ಅವರು ಶುಕ್ರವಾರ ಬಾಲಕನ ಶವವನ್ನು ವಶಪಡಿಸಿಕೊಂಡಿದ್ದಾರೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Heat wave: ಉಷ್ಣ ಮಾರುತಕ್ಕೆ ತತ್ತರಿಸಿದ ಉತ್ತರ ಭಾರತ; ದೇಶಾದ್ಯಂತ 143 ಜನ ಬಲಿ

ಭಾರೀ ಮಳೆಗೆ ತತ್ತರಿಸಿದ್ದ ಸಿಕ್ಕಿಂ

ಕಳೆದ ವಾರ ಸಿಕ್ಕಿಂ ಭಾರೀ ಮಳೆಯ ಹೊಡೆತಕ್ಕೆ ಸಿಲುಕಿ ತತ್ತರಿಸಿತ್ತು. ಹಲವೆಡೆ ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂ ಭಾಗದ ಸಂಪರ್ಕ ಕಡಿತವಾಗಿತ್ತು. ಜತೆಗೆ ತೀಸ್ತಾ ನದಿಯು ಉಕ್ಕಿ ಹರಿದು ನೂರಾರು ನಿವಾಸಿಗಳನ್ನು ಸುರಕ್ಷಿತ ಕಡೆಗೆ ಸ್ಥಳಾಂತರಿಸಲಾಗಿತ್ತು. ಉತ್ತರ ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಭಾರಿ ಭೂಕುಸಿತದಿಂದಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದರು. ಸದ್ಯ ಅಲ್ಲಿನ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

Exit mobile version