Site icon Vistara News

Food Poisoning: ಮೊಹರಂ ಮೆರವಣಿಗೆ ವೇಳೆ ಷರಬತ್ತು ಸೇವಿಸಿ 400 ಮಂದಿ ಅಸ್ವಸ್ಥ

Food Poisoning

Food Poisoning

ಜೈಪುರ: ಮೊಹರಂ (Muharram 2024) ಆಚರಣೆ ಮಧ್ಯೆ ರಾಜಸ್ತಾನದಲ್ಲಿ ಮಂಗಳವಾರ (ಜುಲೈ 16) ದುರಂತವೊಂದು ಸಂಭವಿಸಿದ್ದು, ಮೆರವಣಿಗೆ ವೇಳೆ ಷರಬತ್ತು ಸೇವಿಸಿದ ಸುಮಾರು 400 ಮಂದಿ ಅಸ್ವಸ್ಥರಾಗಿದ್ದಾರೆ. ರಾಜಸ್ತಾನದ ಬನ್ಸ್ವಾರಾದಲ್ಲಿ ಈ ಘಟನೆ ನಡೆದಿದ್ದು, ವಾಂತಿ ಮತ್ತು ಅತಿಸಾರ ಕಾಣಿಕೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ (Food Poisoning).

ಮಧ್ಯರಾತ್ರಿ ಮುಹರ್ರಮ್‌ ಮೆರವಣಿಗೆಯಲ್ಲಿ ಭಾಗವಹಿಸಿದ ಹಲವು ಮಂದಿ ಅಸ್ವಸ್ಥರಾದ ಕೂಡಲೇ ರಸ್ತೆ ಬದಿಯಲ್ಲಿದ್ದ ಮೆಡಿಕಲ್‌ಗಳಿಗೆ ನುಗ್ಗಿ ಬೀಗ ಒಡೆದು ಔಷಧ ಮತ್ತು ಒಆರ್‌ಎಸ್‌ ತೆಗೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಮೂವರು ವೈದ್ಯರು ಧಾವಿಸಿ ಬಂದು ಸುಮಾರು ಅಸ್ವಸ್ಥರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಆರಂಭಿಸಿದರು. ಏಕಕಾಲಕ್ಕೆ 400ಕ್ಕೂ ಹೆಚ್ಚು ಮಂದಿ ಸ್ಥಳೀಯ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಸುಮಾರು 100 ಜನರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ವೈದ್ಯ ಹೀರಾಲಾಲ್ ತಬಿಯಾತ್ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಹಲವು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಅಲ್ಲದೆ ಅಸ್ವಸ್ಥರು ಸೇವಿಸಿರುವ ಷರಬತ್ತಿನ ಮಾದರಿಯನ್ನು ಒದಗಿಸುವಂತೆ ವೈದ್ಯರು ಸೂಚಿಸಿದ್ದಾರೆ. ಪರಿಶೀಲನೆ ಬಳಿಕವಷ್ಟೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಯೋಜಕರು ಹೇಳಿದ್ದೇನು?

ಘಟನೆ ಬಗ್ಗೆ ಮಾಹಿತಿ ನೀಡಿದ ಅಂಜುಮನ್ ಇಸ್ಲಾಮಿಯಾ ಮುಖ್ಯಸ್ಥ ಶೋಯೆಬ್ ಖಾನ್ ಈ ಘಟನೆ ಮಧ್ಯರಾತ್ರಿ ನಡೆದಿದೆ ಎಂದು ಹೇಳಿದ್ದಾರೆ. ಮೊಹರಂ ಮೆರವಣಿಗೆಯಲ್ಲಿ ಸಮಯದಲ್ಲಿ ಸಮುದಾಯದ ಕೆಲವು ಸದಸ್ಯರು ಸ್ಟಾಲ್ ಸ್ಥಾಪಿಸಿದ್ದರು ಮತ್ತು ಅಲ್ಲಿನ ಷರಬತ್ತು ಕುಡಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 400 ಜನರು ಅನಾರೋಗ್ಯಕ್ಕೆ ಒಳಗಾದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mid Day Meal: ಕಲಬುರಗಿಯಲ್ಲಿ ಬಿಸಿಯೂಟ ಉಂಡ 33 ವಿದ್ಯಾರ್ಥಿಗಳು ಅಸ್ವಸ್ಥ; 3 ದಿನಗಳಲ್ಲಿ ಎರಡನೇ ಘಟನೆ

ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ರಾಯಚೂರು: ಮಾನ್ವಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥಗೊಂಡ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. 25ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ವಾಂತಿ-ಭೇದಿ ಸಮಸ್ಯೆ ಉಲ್ಬಣಗೊಂಡಿತ್ತು. ರಾತ್ರಿ ಊಟ ಮಾಡಿದ ಬಳಿಕ ವಿದ್ಯಾರ್ಥಿಗಳು ನಿದ್ದೆಗೆ ಜಾರಿದ್ದರು. ಆದರೆ ಊಟ ಸೇವಿಸಿದ ಅರ್ಧ ಗಂಟೆಯಲ್ಲೇ ಏಕಕಾಲಕ್ಕೆ ವಿದ್ಯಾರ್ಥಿಗಳು ವಾಂತಿ-ಭೇದಿಯಿಂದ ಸುಸ್ತಾಗಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಜೂ. 29ರಂದು ಇಂತಹದ್ದೆ ಘಟನೆ ಕಲಬುರಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿತ್ತು. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಹೊರವಲಯದ ಶಾಲೆಯಲ್ಲಿ ಆಹಾರ ಸೇವಿಸಿದ 17 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಉಪಾಹಾರ ಸೇವನೆ ಬಳಿಕ ಏಕಾಏಕಿ ವಾಂತಿ ಮಾಡಿಕೊಂಡು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಅವರನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Exit mobile version