ನವದೆಹಲಿ: ಸುಪ್ರೀಂ ಕೋರ್ಟ್ ಕಲಾಪಗಳು ಇಂದು ಲೈವ್ ಸ್ಟ್ರೀಮ್ (Live Streaming) ಆಗುತ್ತಿವೆ. ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಲಾಪಗಳ ಲೈವ್ ಸ್ಟ್ರೀಮಿಂಗ್ ನಡೆದಿದೆ. ಸುಪ್ರೀಂ ಕೋರ್ಟ್‌ನ ವೆಬ್‌ಕಾಸ್ಟ್ ಪೋರ್ಟಲ್‌ನಲ್ಲಿ ನ್ಯಾಯಾಲಯದ ಕಲಾಪಗಳನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.
ಲೈವ್ ಸ್ಟ್ರೀಮಿಂಗ್ ಕುರಿತು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಅಪ್‌ಲೋಡ್ ಮಾಡಲಾಗಿದೆ. ಅದರಂತೆ, ಲೈವ್ ಸ್ಟ್ರೀಮಿಂಗ್ ಆಗುತ್ತಿದೆ. ಆದಾಗ್ಯೂ, ಶುಕ್ರವಾರ ಒಂದೇ ದಿನ ನೇರ ಪ್ರಸಾರ ಇರಲಿದೆಯೋ ಅಥವಾ ಪ್ರತಿದಿನವೂ ಇರಲಿದೆಯೋ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.
ಸರ್ವೋಚ್ಚ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರಕ್ಕೆ ಪ್ರತ್ಯೇಕ ವೇದಿಕೆ ರಚಿಸಲು ಪ್ರಸ್ತಾಪ ಸಲ್ಲಿಸುವ ಕುರಿತು ಕೋರ್ಟ್‌ನ ಇ-ಸಮಿತಿ ಮುಖ್ಯಸ್ಥರಾದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂವಿಧಾನದ ೨೧ನೇ ಕಲಂ ಪ್ರಕಾರ ಸಾರ್ವಜನಿಕರೂ ಕೋರ್ಟ್ ಕಲಾಪಗಳನ್ನು ವೀಕ್ಷಿಸುವಂತಾಗಲಿ ಎಂಬ ದೃಷ್ಟಿಯಿಂದ ಕಲಾಪಗಳನ್ನು ನೇರ ಪ್ರಸಾರ ಮಾಡಲು ೨೦೧೮ರಲ್ಲಿಯೇ ಕೋರ್ಟ್ ತೀರ್ಪು ಹೊರಡಿಸಿತ್ತು. ಇದಾಗಿ ನಾಲ್ಕು ವರ್ಷದ ಬಳಿಕ ಲೈವ್ ಸ್ಟ್ರೀಮಿಂಗ್ ಜಾರಿಗೆ ಬರುತ್ತಿದೆ.
ಸದ್ಯ ಕರ್ನಾಟಕ, ಗುಜರಾತ್, ಒಡಿಶಾ, ಜಾರ್ಖಂಡ್, ಪಟನಾ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ಗಳ ಕಲಾಪಗಳು ಆಯಾ ಕೋರ್ಟ್‌ಗಳ ಯುಟ್ಯೂಬ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಆಗುತ್ತಿವೆ. ಆದರೆ, ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪಗಳ ಲೈವ್ ಸ್ಟ್ರೀಮಿಂಗ್ ನಡೆಯುತ್ತಿದೆ.
ಇದನ್ನೂ ಓದಿ | Supreme Court | ಬೇನಾಮಿ ಕಾಯಿದೆ ಅಸಾಂವಿಧಾನಿಕ, ಜೈಲು ಶಿಕ್ಷೆ ಇಲ್ಲ! ಸುಪ್ರೀಂ ಕೋರ್ಟ್ ಹೇಳಿದ್ದೇನು?