ನವ ದೆಹಲಿ: ದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ಆರೋಪ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಇದನ್ನು ತಡೆಯದೇ ಇದ್ದರೆ ದೇಶದ ಭದ್ರತೆಗೆ ಅಪಾಯವಾಗಲಿದೆ. ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಇದರಿಂದ ಧಕ್ಕೆಯಾಗಬಹುದು ಎಂದು ಸೋಮವಾರ ಕಳವಳ ವ್ಯಕ್ತಪಡಿಸಿದೆ. ಬಲವಂತದ ಮತಾಂತರ ( Forced religious conversion ) ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಅದು ತಿಳಿಸಿದೆ.
ದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಇಂಥ ಬಲವಂತದ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ. ಅಕ್ಕಿ ಮತ್ತು ಗೋಧಿಯನ್ನು ವಿತರಿಸಿ ಬಲವಂತದ ಮತಾಂತರ ಮಾಡಿರುವ ನಿದರ್ಶನಗಳು ಇವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದಾಗ, ಹಾಗಾದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ ಎಂದು ಸುಪ್ರೀಂಕೋರ್ಟ್ ಪೀಠ ಪ್ರಶ್ನಿಸಿತು.
ಬಲವಂತದ ಮತಾಂತರವನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನವೆಂಬರ್ 22ರ ಒಳಗೆ ಅಫಿಡವಿಟ್ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚಿಸಿತು.
ಬಲವಂತದ ಮತಾಂತರ ಅತ್ಯಂತ ಗಂಭೀರ: ಬಲವಂತದ ಮತಾಂತರ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಇದು ಕೇವಲ ದೇಶದ ಭದ್ರತೆ ಮಾತ್ರ ಸಂಚಕಾರವಾಗಿಲ್ಲ, ಜನರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಕೂಡ ಧಕ್ಕೆ ಉಂಟು ಮಾಡಲಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್ ಷಾ ಮತ್ತು ಹಿಮಾ ಕೊಹ್ಲಿ ತಿಳಿಸಿದ್ದಾರೆ.
ಬಲಾತ್ಕಾರದ ಮತಾಂತರ ಆರೋಪಗಳು ನಿಜವಾಗಿದ್ದಲ್ಲಿ, ಅತ್ಯಂತ ಗಂಭೀರ ಎಂದು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಅದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಲು ಸಕಾಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 28ಕ್ಕೆ ನಿಗದಿಪಡಿಸಿದೆ.
ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು, ಮೂಢನಂಬಿಕೆ, ಬಲವಂತದ ಮತಾಂತರ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಕೋರ್ಟ್ ಪೀಠ ಕೈಗೆತ್ತಿಕೊಂಡಿತ್ತು. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದೆ. ಆದರೆ ಬಲವಂತದ ಮತಾಂತರಕ್ಕೆ ಸ್ವಾತಂತ್ರ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.