ನವದೆಹಲಿ: ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ವಿವರಗಳನ್ನು ಒದಗಿಸುವಂತೆ ಬಿಬಿಸಿ(BBC)ಗೆ ಇ.ಡಿ ಸೂಚಿಸಿದೆ. ಬ್ರಿಟನ್ ಮೂಲದ ಮಾಧ್ಯಮ ಸಂಸ್ಥೆ ಬಿಬಿಸಿ, ತೆರಿಗೆ ವಂಚಿಸಿದ ಪ್ರಕರಣವನ್ನು ಎದುರಿಸುತ್ತಿದೆ. ಈ ಹಿಂದೆ ಇ.ಡಿ ಅಧಿಕಾರಿಗಳು ಭಾರತದಲ್ಲಿರುವ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿ, ಶೋಧ ನಡೆಸಿತ್ತು. ಬಿಬಿಸಿಯ ವಿದೇಶಿ ಪಾವತಿಗಳನ್ನು ಜಾರಿ ನಿರ್ದೇಶನಾಲಯವು (Enforcement Directorate – ED) ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA)ಯಡಿ ಬಿಬಿಸಿ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಕೈಗೊಂಡಿದೆ. ಅಕೌಂಟ್ಸ್ ಪುಸ್ತಕಗಳು ಮತ್ತು ಹಣಕಾಸು ಸ್ಟೇಟ್‌ಮೆಂಟ್ ಸೇರಿದಂತೆ ಎಲ್ಲ ವಿವರಗಳನ್ನು ಸಲ್ಲಿಸುವಂತೆ ಇಡಿ ಬಿಬಿಸಿಗೆ ಸೂಚಿಸಿದೆ.
ನಿಯಮಗಳ ಉಲ್ಲಂಘನೆ, ಲಾಭದ ವರ್ಗಾವಣೆ ಮತ್ತು ತೆರಿಗೆ ವಂಚನೆ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದ ಇ.ಡಿ ಇತ್ತೀಚೆಗಷ್ಟೇ ಬಿಬಿಸಿಯ ದಿಲ್ಲಿ ಮತ್ತು ಮುಂಬೈ ಕಚೇರಿಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಇದಾದ ಸುಮಾರು ತಿಂಗಳ ಬಳಿಕ ಈಗ ಮತ್ತೆ ವಿಚಾರಣೆಯನ್ನು ಬಿಬಿಸಿ ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಇ.ಡಿ ಕೈಗೊಂಡ ಸರ್ವೇ ವೇಳೆ, ಬಿಬಿಸಿಯ ನೌಕರರು, ಪ್ರಶ್ನೆಗಳಿಗೆ ಉತ್ತರಿಸು ಕಚೇರಿಯಲ್ಲಿ ರಾತ್ರಿ ಉಳಿದಿದ್ದರು.
ಆದಾಯ ತೆರಿಗೆ ಇಲಾಖೆಯ ಆಡಳಿತ ಮಂಡಳಿಯಾದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT), ವಿವಿಧ ಬಿಬಿಸಿ ಗ್ರೂಪ್ ಘಟಕಗಳು ತೋರಿಸಿದ ಆದಾಯ ಮತ್ತು ಲಾಭಗಳು ಭಾರತದಲ್ಲಿನ ಅವರ ಕಾರ್ಯಾಚರಣೆಗಳ ಪ್ರಮಾಣಕ್ಕೆ ಸಮಂಜಸವಾಗಿಲ್ಲ ಮತ್ತು ತೆರಿಗೆಯನ್ನು ಪಾವತಿಸಲಾಗಿಲ್ಲ ಎಂದು ಹೇಳಿದೆ. ಅಲ್ಲದೇ, ಲಾಭವನ್ನು ಕೆಲವು ವಿದೇಶಿ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: IT Survey at BBC Offices: 58 ಗಂಟೆ ಬಳಿಕ ಬಿಬಿಸಿ ಕಚೇರಿಗಳಲ್ಲಿ ‘ಸಮೀಕ್ಷೆ’ ನಿಲ್ಲಿಸಿದ ಐಟಿ, ಸಿಕ್ಕ ದಾಖಲೆ ಏನು?
ಸರ್ಕಾರದಿಂದ ದ್ವೇಷದ ಕ್ರಮ: ಆರೋಪ
ಬಿಬಿಸಿಯು ಇತ್ತೀಚೆಗಷ್ಟೇ ಗೋಧ್ರೋತ್ತರ ಹತ್ಯಾಕಾಂಡ ಸಂಬಂಧ ಎರಡು ಭಾಗಗಳ ಡಾಕ್ಯುಮೆಂಟರಿ ಲಾಂಚ್ ಮಾಡಿತ್ತು. ಈ ಸಾಕ್ಷ್ಯ ಚಿತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದ ಕೇಂದ್ರ ಸರ್ಕಾರವು, ಅವುಗಳ ಪ್ರಸಾರವನ್ನು ತಡೆ ಹಿಡಿದಿದ್ದವು. ಇದಾದ ಬಳಿಕವಷ್ಟೇ, ಇ.ಡಿ ಬಿಬಿಸಿ ಮೇಲೆ ತೆರಿಗೆ ಸರ್ವೇ ಕೈಗೊಂಡಿತ್ತು. ಹಾಗಾಗಿ, ಕೇಂದ್ರ ಸರ್ಕಾರವು ದ್ವೇಷವನ್ನು ಸಾಧಿಸಲು ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪವು ಕೇಳಿ ಬಂದಿದೆ.