ಅಮೂಲ್ಯ ವಸ್ತುಗಳನ್ನು ಕಳೆದುಕೊಂಡಾಗ ಆಗುವ ನೋವು, ಅದನ್ನು ಕಳೆದುಕೊಂಡವರಿಗೇ ಗೊತ್ತು. ಅದು ಸಿಕ್ಕರೆ ಪುಣ್ಯ ಎಂದುಕೊಳ್ಳುತ್ತೇವೆ, ಸಿಗದೆ ಇದ್ದರೆ, ಸದಾ ಅದೊಂದು ಕೊರಗು ಉಳಿದು ಹೋಗುತ್ತದೆ. ಆದರೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನ ಸಿಬ್ಬಂದಿ, ವಿದೇಶಿ ಉದ್ಯಮಿಯೊಬ್ಬರಿಗೆ ಅಂಥ ಕೊರಗು, ನಿರಾಸೆ-ನೋವು ಕಾಡುವುದನ್ನು ತಪ್ಪಿಸಿದ್ದಾರೆ. ಅವರು ಏರ್ಪೋರ್ಟ್ನಲ್ಲಿ ಕಳೆದುಕೊಂಡಿದ್ದ ವಾಚ್ನ್ನು ಹುಡುಕಿ, ಜೋಪಾನವಾಗಿ ಅವರಿಗೇ ಮರಳಿಸಿದ್ದಾರೆ.
ಆಂಡರ್ಸ್ ಆಂಡರ್ಸನ್ ಎಂಬ ಉದ್ಯಮಿ ಲಿಂಕ್ಡ್ಇನ್ನಲ್ಲಿ ತಾವು ವಾಚ್ ಕಳೆದುಕೊಂಡ ಮತ್ತು ಏರ್ಪೋರ್ಟ್ ಸಿಬ್ಬಂದಿ ಅದನ್ನು ಹುಡುಕಿ, ಮರಳಿಸಿಕೊಟ್ಟ ಬಗ್ಗೆ ಬರೆದುಕೊಂಡಿದ್ದಾರೆ. ಯುರೋಪ್ನ ಸ್ಕ್ಯಾಂಡಿನೇವಿಯಾದಲ್ಲಿರುವ ಟ್ರೈಗ್ ಇನ್ಶೂರೆನ್ಸ್ ಕಂಪನಿಯಲ್ಲಿ ಬಿಸಿನೆಸ್ ಟೆಕ್ನಾಲಜಿ ಎಂಟರ್ಪ್ರೈಸ್ ಸೊಲ್ಯೂಷನ್ಸ್ನ ನಿರ್ದೇಶಕ ಮತ್ತು ಮುಖ್ಯಸ್ಥ. ಇವರು ಇತ್ತೀಚೆಗೆ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಬೆಂಗಳೂರಿಗೂ ಆಗಮಿಸಿದ್ದರು. ವಾಪಸ್ ಡೆನ್ಮಾರ್ಕ್ಗೆ ತೆರಳುವ ದಿನ ಅವರು ಬೆಂಗಳೂರು ಏರ್ಪೋರ್ಟ್ನಲ್ಲಿ ತಮ್ಮ ವಾಚ್ನ್ನು ಎಕ್ಸ್ ರೇ ಟ್ರೇ (ಏರ್ಪೋರ್ಟ್ನಲ್ಲಿ ಇರುವ ಸ್ಕ್ಯಾನರ್ ಟ್ರೇ)ಗೆ ಹಾಕಿದ್ದರು. ಬಳಿಕ ಅದನ್ನು ಹಾಗೇ ಮರೆತು ವಿಮಾನ ಹತ್ತಿ ಹೋಗಿದ್ದರು. ಆಗಿನಿಂದಲೂ ಏನೇನಾಯಿತು? ಆ ವಾಚ್ ಹೇಗೆ ಪಡೆದೆ ಎಂಬುದನ್ನು ಅವರು ತಮ್ಮ ಲಿಂಕ್ಡ್ ಇನ್ನಲ್ಲಿ ಹೇಳಿಕೊಂಡಿದ್ದಾರೆ.
‘ನಾನು ವಾಚ್ ಕಳೆದುಹೋಯಿತು, ಇನ್ನು ಅದು ಸಿಗುವುದಿಲ್ಲ ಎಂದೇ ಅಂದುಕೊಂಡಿದ್ದೆ. ಆದರೆ ಆ ವಾಚ್ನೊಂದಿಗೆ ನನಗೆ ಭಾವನಾತ್ಮಕ ಸಂಬಂಧ ಇತ್ತು. ಅದು ನನ್ನ ತಾತನ ಕೈಗಡಿಯಾರ. ನನ್ನ ಹುಟ್ಟುಹಬ್ಬಕ್ಕೆ ಅವರು ಉಡುಗೊರೆ ಕೊಟ್ಟಿದ್ದರು. ಅವರೀಗ ಬದುಕಿಲ್ಲ. ಆದರೆ ಈ ವಾಚ್ ನನ್ನ ಅಜ್ಜನ ನೆನಪಾಗಿ ಸದಾ ನನ್ನ ಕೈಯಲ್ಲಿ ಇರುತ್ತಿತ್ತು. ಹೀಗಾಗಿ ವಾಚ್ ಕಳೆದುಕೊಂಡ ಬಗ್ಗೆ ನಾನು ಬೆಂಗಳೂರು ಏರ್ಪೋರ್ಟ್ ಆಡಳಿತಕ್ಕೆ ಒಂದು ಇಮೇಲ್ ಹಾಕಿದೆ. ಅವರು ಅರ್ಧಗಂಟೆಯ ಒಳಗೆ ನನಗೆ ಪ್ರತಿಕ್ರಿಯೆ ಕಳಿಸಿದರು. ಕಳೆದು ಹೋದ ವಾಚ್ ಹುಡುಕಲು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುವುದಾಗಿ ಭರವಸೆ ನೀಡಿದರು. ಆದರೂ ನನಗೇನೂ ಭರವಸೆ ಇರಲಿಲ್ಲ. ನಾನು ಯಾವುದಕ್ಕೂ ಇರಲಿ ಎಂದು ನಮ್ಮ ಭಾರತದ ಸಹಭಾಗಿ ಕಂಪನಿಯಾದ ಟಿಸಿಎಸ್ಗೂ ಮೇಲ್ ಮಾಡಿಟ್ಟಿದ್ದೆ. ಅವರೂ ನನಗೆ ಪ್ರತಿಕ್ರಿಯೆ ನೀಡಿದ್ದರು.’
‘ಆದರೂ ನನಗೆ ತುಂಬ ಭರವಸೆ ಇರಲಿಲ್ಲ. ಆದರೆ ನವೆಂಬರ್ 27ರಂದು ನನಗೇ ಅಚ್ಚರಿಯಾಗುವ ಇಮೇಲ್ ಬಂದಿತ್ತು. ಅದು ಬೆಂಗಳೂರು ಏರ್ಪೋರ್ಟ್ನ ಟರ್ಮಿನಲ್ ಲಾಸ್ಟ್ ಆ್ಯಂಡ್ ಫೌಂಡ್ನಿಂದ ಬಂದ ಸಂದೇಶ ಆಗಿತ್ತು. ‘ನಿಮ್ಮ ವಾಚ್ ಸಿಕ್ಕಿದೆ, ಅದನ್ನು ಕಳಿಸುತ್ತಿದ್ದೇವೆ’ ಎಂಬ ಮೆಸೇಜ್ ನೋಡಿ ನಾನು ಕಣ್ಣರಳಿಸಿದ್ದೆ. ಆಗಲೇ ನನಗೆ ಭಾರತದ ಪವರ್ ಅರ್ಥವಾಯಿತು. ಕೊನೆಗೂ ನನ್ನ ವಾಚ್ ನನಗೆ ಸಿಕ್ಕಿತು. ಇದು ನನ್ನ ಪಾಲಿಗೆ ತುಂಬ ಭಾವನಾತ್ಮಕ ಕ್ಷಣವಾಗಿತ್ತು‘ ಎಂದು ಅಂಡರ್ಸನ್ ಬರೆದುಕೊಂಡಿದ್ದಾರೆ. ‘ಹಾಗೇ ಬೆಂಗಳೂರು ಏರ್ಪೋರ್ಟ್ ಆಡಳಿತದ ಕಾರ್ಯಕ್ಷಮತೆ, ವೃತ್ತಿಪರತೆ ಮತ್ತು ಬದ್ಧತೆಯನ್ನೂ ಅಂಡರ್ಸನ್ ಹೊಗಳಿದ್ದಾರೆ’. ಇವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಸಿಕ್ಕಾಪಟೆ ವೈರಲ್ ಆಗುತ್ತಿವೆ. ಅನೇಕರು ಕಮೆಂಟ್ ಮಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ನಿಯಮಾವಳಿಯಲ್ಲಿ ಮೇಲ್ಮನವಿ ಅವಕಾಶ, ವಿಸ್ತಾರ ನ್ಯೂಸ್ ವರದಿ ಬೆನ್ನಲ್ಲೇ ಆರಗ ಜ್ಞಾನೇಂದ್ರ ಸ್ಪಷ್ಟನೆ