Site icon Vistara News

60ನೇ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ ಮಾಜಿ ಮುಖ್ಯಮಂತ್ರಿ! ಯಾರು ಅವರು?

Former Chief Minister who got PhD at the age of 60

ನವದೆಹಲಿ: ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ, ಇಚ್ಛಾಶಕ್ತಿ ಇರಬೇಕಷ್ಟೇ. 70, 80ನೇ ವಯಸ್ಸಿನಲ್ಲಿ 10ನೇ ತರಗತಿಯನ್ನು ಪಾಸು ಮಾಡಿದ್ದನ್ನು ಕೇಳಿದ್ದೇವೆ. ಆದರೆ, ರಾಜಕಾರಣಿಯೊಬ್ಬರು ತಮ್ಮ 60ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ (doctorate of philosophy) ಪಡೆದಿರುವುದು ಇದೇ ಮೊದಲಿರಬೇಕು. ಹೌದು, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ತಮ್ಮ 60ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿಯನ್ನು (ಮ) ಸಂಪಾದಿಸಿದ್ದಾರೆ. ಆ ಮೂಲಕ ಕಲಿಕೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಚಂಡೀಗಢ ವಿಶ್ವ ವಿದ್ಯಾಲಯದಿಂದ (Chandigarh university) ಅವರು ಡಾಕ್ಟ್‌ರೇಟ್ ಪದವಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ವಿವಿಯ ಘಟಿಕೋತ್ಸವದಲ್ಲಿ ಚರಣಜಿತ್ ಸಿಂಗ್ ಚನ್ನಿ ಅವರಿಗೆ ಕುಲಪತಿ ರೇಣ ವಿಗ್ ಅವರು ಡಾಕ್ಟ್‌ರೇಟ್ ಪದವಿ ಪ್ರದಾನ ಮಾಡಿದರು. ಚನ್ನಿ ಅವರು ರಾಜಕೀಯ ಶಾಸ್ತ್ರದಲ್ಲಿ (political science) ಸಂಶೋಧನೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಸಿಎಂ ಚನ್ನಿ ಅವರು, ಡಾಕ್ಟರೇಟ್ ಪದವಿಯನ್ನು ಮಹತ್ವದ ಮೈಲುಗಲ್ಲು ಎಂದು ಕರೆದಿದ್ದಾರೆ. ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ನನ್ನ ಪಿಎಚ್‌ಡಿಯನ್ನು ಹೆಮ್ಮೆಯಿಂದ ಪಡೆದುಕೊಂಡಿದ್ದೇನೆ. ನನ್ನ ಶೈಕ್ಷಣಿಕ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದೇನೆ. ಈ ಪ್ರಯಾಣದ ಉದ್ದಕ್ಕೂ ನನ್ನ ಸಲಹೆಗಾರರು, ಮಾರ್ಗದರ್ಶಕರು ಮತ್ತು ಪ್ರೀತಿಪಾತ್ರರಿಂದ ನಂಬಲಾಗದ ಬೆಂಬಲಕ್ಕಾಗಿ ಕೃತಜ್ಞರಾಗಿರುತ್ತೇನೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪಂಜಾಬ್ ಮಾಜಿ ಸಿಎಂ ಚರಣ್‌ಜಿತ್ ಸಿಂಗ್‌ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಚರಣ್‌ಜಿತ್ ಸಿಂಗ್ ಚನ್ನಿ ವಕೀಲರೂ ಹೌದು. ಜತೆಗೆ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪಾಲಿಟಿಕಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡಿದ್ದಾರೆ. ಶಿಕ್ಷಣದ ಹಿಂದಿನ ತಮ್ಮ ಈ ಬದ್ಧತೆಗೆ ತಮ್ಮ ತಂದೆ ಹರ್ಸಾ ಸಿಂಗ್ ಕಾರಣ ಎಂದು ಚನ್ನಿ ಅವರು ಈ ಹಿಂದೆ ಹೇಳಿಕೊಂಡಿದ್ದರು. ನಮಗೆ ಶಿಕ್ಷಣ ಕೊಡಿಸಬೇಕೆಂಬ ಆಸೆಯಿಂದ ನಮ್ಮನ್ನು ನಮ್ಮ ಹಳ್ಳಿಯಿಂದ ಖರಾರ್‌ಗೆ ಸ್ಥಳಾಂತರಿಸಿದರು ಎಂದು ಮಾಜಿ ಸಿಎಂ ಚನ್ನಿ ಹೇಳಿಕೊಂಡಿದ್ದರು.

ಇದನ್ನೂ ಓದಿ: PhD not mandatory : ವಿವಿಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಕಡ್ಡಾಯವಲ್ಲ

ನಾನು ವಿದ್ಯೆಯ ಮೇಲಿನ ಪ್ರೀತಿಯಿಂದಾಗಿ ಕಲಿಯುತ್ತಿದ್ದೇನೆ ಹೊರತು ಅರ್ಹತೆಗಾಗಿಯಲ್ಲ ಎಂದು ಈ ಹಿಂದೆ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಚನ್ನಿ ಹೇಳಿಕೊಂಡಿದ್ದರು. ಪಿಎಚ್‌ಡಿ ಅಧ್ಯಯನಕ್ಕಾಗಿ ಚನ್ನಿ ಅವರು 2017 ಡಿಸೆಂಬರ್ 31ರಂದು ಪ್ರೊಫೆಸರ್ ಎಮಾನ್ಯುಲೆ ನಾಹರ್ ಅವರು ಮಾರ್ಗದರ್ಶನದಲ್ಲಿ ನೋಂದಣಿ ಮಾಡಿಕೊಂಡಿದ್ದರು. ಚನ್ನಿ ಅವರು ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: ಯುಪಿಎ ಸರ್ಕಾರ ಮತ್ತು ಮೋದಿ ಯುಗದಲ್ಲಿ ಅದರ ಆಂತರಿಕ ಸಂಘಟನೆ ಮತ್ತು ಕಾರ್ಯಕ್ಷಮತೆ, ಪಾತ್ರ ಮತ್ತು ಸಾಧನೆಗಳ ಅಧ್ಯಯನ(Indian National Congress: A study of its internal organisation and the performance, role, and achievements during the UPA government and the Modi era)’ ಎಂಬ ವಿಷಯದ ಕುರಿತು ಪಿಎಚ್‌ಡಿ ಮಾಡಿದ್ದಾರೆ.

ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಡಾಕ್ಟ್‌ರೇಟ್ ಪದವಿ ಪ್ರದಾನ

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version