Site icon Vistara News

Raaj Kumar Anand: ಆಪ್‌ ಮಾಜಿ ಸಚಿವ ರಾಜ್‌ ಕುಮಾರ್‌ ಆನಂದ್‌ ಶಾಸಕ ಸ್ಥಾನದಿಂದಲೂ ಅನರ್ಹ; ಕಾರಣ ಇಲ್ಲಿದೆ

Raaj Kumar Anand

Former Delhi Minister Raaj Kumar Anand disqualified from membership of assembly: Speaker Ram Niwas Goel

ನವದೆಹಲಿ: ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಜೈಲುಪಾಲಾದ ಬೆನ್ನಲ್ಲೇ ದೆಹಲಿ ವಿಧಾನಸಭೆ ಸದಸ್ಯತ್ವದಿಂದ ಶಾಸಕ ರಾಜ್‌ ಕುಮಾರ್‌ ಆನಂದ್‌ ಅವರನ್ನು ಅನರ್ಹಗೊಳಿಸಲಾಗಿದೆ. ಈ ಕುರಿತು ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ (Ram Niwas Goel) ಮಾಹಿತಿ ನೀಡಿದ್ದಾರೆ. ರಾಜ್‌ ಕುಮಾರ್‌ ಆನಂದ್‌ ಅವರು ಆಮ್‌ ಆದ್ಮಿ ಪಕ್ಷದ ನಾಯಕರಾಗಿದ್ದರು. ಅಲ್ಲದೆ, ಇವರು ದೆಹಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಈಗ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

“ರಾಜ್‌ ಕುಮಾರ್‌ ಆನಂದ್‌ ಅವರಿಗೆ ಜೂನ್‌ 10ರೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ ನೀಡಲಾಗಿತ್ತು ಆದರೆ, ಅವರು ನೋಟಿಸ್‌ಗೆ ಇದುವರೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಜೂನ್‌ 11ರಂದು ಹಾಜರಾಗಬೇಕು ಎಂದು ಕೂಡ ಅದೇ ನೋಟಿಸ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೂ, ಅವರು ಹಾಜರಾಗಿಲ್ಲ. ಜೂನ್‌ 14ರವರೆಗೆ ಹಾಜರಾಗಲು ಕೂಡ ಸಮಯಾವಕಾಶ ನೀಡಲಾಗಿತ್ತು. ಹೀಗಿದ್ದರೂ ಅವರು ಹಾಜರಾಗಿಲ್ಲ. ಹಾಗಾಗಿ, ವಿಧಾನಸಭೆಯಿಂದ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ” ಎಂದು ಸ್ಪೀಕರ್‌ ತಿಳಿಸಿದ್ದಾರೆ.

ಯಾಕಾಗಿ ಅನರ್ಹ?

ರಾಜ್‌ ಕುಮಾರ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಮ್‌ ಆದ್ಮಿ ಪಕ್ಷವನ್ನು ತೊರೆದು, ಅವರು ಬಹುಜನ ಸಮಾಜ ಪಕ್ಷವನ್ನು ಸೇರ್ಪಡೆಯಾಗಿದ್ದರು. ಅಷ್ಟೇ ಅಲ್ಲ, ಬಿಎಸ್‌ಪಿ ಸೇರಿ, ನವದೆಹಲಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಹಾಗಾಗಿ, ಅವರಿಗೆ ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ ಅವರು ನೋಟಿಸ್‌ ಜಾರಿಗೊಳಿಸಿದ್ದರು. ರಾಜ್‌ ಕುಮಾರ್‌ ಆನಂದ್‌ ಅವರು 2020ರ ವಿಧಾನಸಭೆ ಚುನಾವಣೆಯಲ್ಲಿ ಆಪ್‌ನಿಂದ ಸ್ಪರ್ಧಿಸಿ, ಪಟೇಲ್‌ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇವರಿಗೆ ಸಚಿವ ಸ್ಥಾನವನ್ನೂ ನೀಡಲಾಗಿತ್ತು.

ಏಪ್ರಿಲ್‌ 10ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ

ಕಳೆದ ಏಪ್ರಿಲ್‌ 10ರಂದು ರಾಜ್‌ ಕುಮಾರ್‌ ಆನಂದ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಜತೆಗೆ ಆಮ್‌ ಆದ್ಮಿ ಪಕ್ಷವನ್ನೂ ತೊರೆದಿದ್ದರು. “ದೆಹಲಿಯ ಸಮಾಜ ಕಲ್ಯಾಣ ಖಾತೆ ಸಚಿವ ಸ್ಥಾನ ಹಾಗೂ ಆಮ್‌ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಮಾರ್ಚ್‌ 21ರಂದೇ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನವಾಗಿದೆ. ಇದುವರೆಗೆ ಅವರು ರಾಜೀನಾಮೆ ನೀಡಿಲ್ಲ. ಆಮ್‌ ಆದ್ಮಿ ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಭ್ರಷ್ಟರ ಜತೆ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಹಾಗಾಗಿ ಪಕ್ಷದಿಂದ ಹೊರಬಂದಿರುವೆ” ಎಂದು ರಾಜ್‌ ಕುಮಾರ್‌ ಆನಂದ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಆಮ್‌ ಆದ್ಮಿ ಪಕ್ಷದ ಕುರಿತು ರಾಜ್‌ ಕುಮಾರ್‌ ಆನಂದ್‌ ಅವರು ಹಲವು ಆರೋಪ ಮಾಡಿದರು. “ಆಪ್‌ನಲ್ಲಿ ದಲಿತ ಸಚಿವರು, ಶಾಸಕರು ಹಾಗೂ ಕೌನ್ಸಿಲರ್‌ಗಳಿಗೆ ಗೌರವ ಇಲ್ಲ. ಪಕ್ಷದಲ್ಲಿ ದಲಿತರಿಗೆ ಮೋಸ ಮಾಡಲಾಗುತ್ತಿದೆ. ಇಂತಹ ವಾತಾವರಣದಲ್ಲಿ ನನಗೆ ಕೆಲಸ ಮಾಡಲು ಆಗುವುದಿಲ್ಲ. ನಾನು ರಾಜೀನಾಮೆ ನೀಡಿರುವ ಸಂದರ್ಭದ ಕುರಿತು ಮಾತನಾಡಬೇಕಿಲ್ಲ. ಯಾವಾಗ ಹೈಕೋರ್ಟ್‌ ಜಾಮೀನು ಅರ್ಜಿ ತಿರಸ್ಕರಿಸಿತೋ, ದೊಡ್ಡ ಪ್ರಮಾದವೇ ನಡೆದಿದೆ ಎಂಬುದು ತಿಳಿಯಿತು. ಹಾಗಾಗಿ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದರು.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಮಧ್ಯಂತರ ಜಾಮೀನು ಅರ್ಜಿ ವಜಾ-ನ್ಯಾಯಾಂಗ ಬಂಧನ ವಿಸ್ತರಣೆ

Exit mobile version